ಬೆಂಗಳೂರು :ರಾಜ್ಯದಲ್ಲಿ ಕೋವಿಡ್ ಲಸಿಕೆ ಕೊರತೆ ಇದೆ. ಕೇಂದ್ರದಿಂದಲೂ ಅಗತ್ಯದಷ್ಟು ಲಸಿಕೆ ಸರಬರಾಜು ಆಗುತ್ತಿಲ್ಲ. ಈ ಸಂಬಂಧ ಹೈಕೋಟ್೯ ಕೂಡ ಸರ್ಕಾರಕ್ಕೆ ಛಿಮಾರಿ ಹಾಕಿದೆ.
ಔಷಧದ ಅಭಾವವನ್ನೇ ಬಂಡವಾಳ ಮಾಡಿಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ದಂಧೆಯಲ್ಲಿ ವೈದ್ಯರ ಕೈವಾಡ ಇರುವುದು ಕಂಡು ಬಂದಿದೆ.
ಎರಡು ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಇವರಲ್ಲಿ ವೈದ್ಯನೊಬ್ಬನಿದ್ದಾನೆ. ಇಷ್ಟು ದಿನ ಆಸ್ಪತ್ರೆ ಸಿಬ್ಬಂದಿ, ಮೆಡಿಕಲ್ ಶಾಪ್‌ನವರು ಭಾಗಿಯಾಗಿರುವುದು ಕಂಡು ಬಂದಿತ್ತು. ಆದರೀಗ ಕೆಲ ವೈದ್ಯರು ದಂಧೆಯಲ್ಲಿ ಇದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿದೆ.
ಉತ್ತರ ವಿಭಾಗ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ಕೋವಿಡ್ ರೋಗಕ್ಕೆ ಅಗತ್ಯವಾಗಿರುವ ರೆಮ್ಡಿಸಿವಿರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಪ್ರತಿದಿನ ಠಾಣೆಯಲ್ಲಿ ವರದಿಯಾಗುತ್ತಿದ್ದು, ಇದನ್ನು ತಡೆಯಲು ಸಿಸಿಬಿ ಕೂಡ ವಿಶೇಷ ತಂಡವನ್ನು ರಚಿಸಿದೆ. ಮಾತೃ ಆಸ್ಪತ್ರೆ ವೈದ್ಯ ಸಾಗರ್ ಹಾಗೂ ವೆಂಕಟೇಶ್ವರ ಆಸ್ಪತ್ರೆಯ ಹೌಸ್ ಕೀಪಿಂಗ್ ಕೃಷ್ಣ ಎಂಬುವವರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಡಾ. ಸಾಗರ್ಗೆ ಮಾತೃ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ ರೋಗಿಗಳಿಗೆ ನೀಡಲು 10 ರೆಮ್ಡಿಸಿವಿರ್ ಚುಚ್ಚುಮದ್ದು ನೀಡಲಾಗಿದ್ದು, ಇದರಲ್ಲಿ ಎರಡನ್ನು ರೋಗಿಗಳಿಗೆ ನೀಡದೇ ತಮ್ಮ ಬಳಿ ಉಳಿಸಿಕೊಂಡಿದ್ದಾರೆ. ಕೃಷ್ಣನ ಜತೆಗೂಡಿ ಇವುಗಳನ್ನು ಕಾಳಸಂತೆಯಲ್ಲಿ 30 ರಿಂದ 40 ಪಟ್ಟು ಹೆಚ್ಚಿಗೆ ಹಣಕ್ಕೆ ಮಾರಾಟ ಮಾಡಲು ಮುಂದಾಗಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ 2 ರೆಮ್ಡಿಸಿವಿರ್ ಚುಚ್ಚುಮದ್ದು, 1 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
9 ಲಸಿಕೆ ವಶಕ್ಕೆ ಪಡೆದ ಪೊಲೀಸರು ಮತ್ತಿಬ್ಬರ ಬಂಧನ, 9 ಲಸಿಕೆ ವಶ : ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಇನ್ನಿಬ್ಬರನ್ನು ಸಂಜಯನಗರ ಪೊಲೀಸರು ಬಂಧಿಸಿ 9 ಲಸಿಕೆ ವಶಪಡಿಸಿಕೊಂಡಿದ್ದಾರೆ.
ವೆಂಕಟೇಶ್ವರ ಆಸ್ಪತ್ರೆಯ ವಾಡ್೯ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರವಿಕುಮಾರ್, ಚೈಲ್ಡ್ ಕೇರ್ ಆಸ್ಪತ್ರೆಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಮುನಿರಾಜು ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಓದಿ:ತೌಕ್ತೆ ಚಂಡಮಾರುತದಿಂದ ಮರವಂತೆ, ಉಳ್ಳಾಲದಲ್ಲಿ ಕಡಲ್ಕೊರೆತ.. ಭಾರಿ ಹಾನಿ