ಬೆಂಗಳೂರು: ಪ್ರತಿವರ್ಷ ದೀಪಾವಳಿ ಹಬ್ಬದಂದು ಪಟಾಕಿಯಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತವೆ. ಹಬ್ಬದ ವೇಳೆ ಮಕ್ಕಳು ಹೆಚ್ಚಾಗಿ ಗಾಯಗೊಳ್ಳುತ್ತಾರೆ. ಪೋಷಕರಿಂದ ಸೂಕ್ತ ಮೇಲ್ವಿಚಾರಣೆ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಈ ಕುರಿತಂತೆ ಬೆಂಗಳೂರಿನ ಡಾ.ಅಗರ್‌ವಾಲ್ ಐ ಹಾಸ್ಪಿಟಲ್‍ನ ಕನ್ಸಲ್ಟೆಂಟ್ ಆಫ್ತಲ್ಮೋಲಾಜಿಸ್ಟ್ ಡಾ.ವೆಂಕಟೇಶ್ ಬಾಬು ಪೋಷಕರಿಗೆ, ಮಕ್ಕಳಿಗೆ ಕೆಲವು ಮಹತ್ವದ ಮಾಹಿತಿ ನೀಡಿದ್ದಾರೆ.
ಡಾ.ಅಗರ್‌ವಾಲ್ ಕಣ್ಣಿನ ಆಸ್ಪತ್ರೆ ವೈದ್ಯ ಡಾ.ವೆಂಕಟೇಶ್ ಬಾಬು ಪಟಾಕಿ ಸಿಡಿತದಿಂದಾಗಿ ದೊಡ್ಡ ಮಟ್ಟದಲ್ಲಿ ಕಣ್ಣುಗಳಿಗೆ ಗಾಯಗಳಾಗುತ್ತವೆ. ಸಾಮಾನ್ಯವಾಗಿ ಕಣ್ಣಿನಲ್ಲಿ ಫಾರಿನ್ ಬಾಡಿ ಸೆನ್ಸೇಷನ್, ಕಣ್ಣು ನೋವು, ದೃಷ್ಟಿ ಮಂದವಾಗುವುದು, ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಸೋರುವುದು ಮತ್ತು ಫೋಟೋ ಸೆನ್ಸಿಟಿವಿಟಿ ಅಥವಾ ಫೋಟೋ ಫೋಬಿಯಾದಂತಹ ಸಮಸ್ಯೆಗಳು ಮಕ್ಕಳಲ್ಲಿ ಕಂಡು ಬರುತ್ತವೆ ಎಂದು ಪೋಷಕರು ವೈದ್ಯರ ಬಳಿ ಹೇಳಿಕೊಳ್ಳುತ್ತಾರೆ. ಆದರೆ ಹೈಫೆಮಾ, ಐಲಿಡ್ ಇಂಜುರಿಸ್, ಟ್ರಾಮ್ಯಾಟಿಕ್ ಇರಿಡೋಡಯಾಲಿಸಿಸ್, ರೇಟಿನಲ್ ಡಿಟ್ಯಾಚ್‍ಮೆಂಟ್ ಮತ್ತು ಕಾರ್ನಿಯಲ್ ಅಬ್ರಾಶನ್‍ಗಳು ಸಾಮಾನ್ಯ ಗಾಯಗಳಾಗಿವೆ ಎಂದರು.
ಹಬ್ಬದಲ್ಲಿ ಪಟಾಕಿಗಳನ್ನು ಸಿಡಿಸುವ ವೇಳೆ ರಕ್ಷಣಾತ್ಮಕವಾದ ಕಣ್ಣಿನ ಗೇರ್ ಬಳಸುವುದನ್ನು ಕಡ್ಡಾಯಗೊಳಿಸಬೇಕು ಮತ್ತು ಮಕ್ಕಳಿಗೆ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಬಾರದು. ಪೋಷಕರ ಜೊತೆಯಲ್ಲೇ ಮಕ್ಕಳು ಪಟಾಕಿ ಸಿಡಿಸಬೇಕು.ಸುರಕ್ಷತಾ ಸೂಚನೆಗಳನ್ನು ಪಾಲಿಸಬೇಕು ಮತ್ತು ಪಟಾಕಿ ಹಚ್ಚುವ ಸ್ಥಳದಿಂದ ಕನಿಷ್ಠ 500 ಅಡಿಗಳಷ್ಟು ದೂರದಲ್ಲಿ ನಿಂತು ವೀಕ್ಷಿಸಬೇಕು ಎಂದು ಡಾ.ವೆಂಕಟೇಶ್ ಬಾಬು ಸಲಹೆ ನೀಡಿದರು.
ಪಟಾಕಿ ಸಿಡಿಸುವಾದ ಅನುಸರಿಬೇಕಾದ ಕ್ರಮಗಳು:
- ಪಟಾಕಿಗಳನ್ನು ಮನೆಯಿಂದ ದೂರದ ಬಯಲು ಪ್ರದೇಶದಲ್ಲಿ ಸಿಡಿಸಬೇಕು.
- ಒಣಗಿದ ಎಲೆಗಳು ಅಥವಾ ಹುಲ್ಲು ಅಥವಾ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವಂತಹ ಜಾಗದಿಂದ ದೂರದಲ್ಲಿ ಪಟಾಕಿಗಳನ್ನು ಸಿಡಿಸುವುದು ಉತ್ತಮ.
- ಪಟಾಕಿ ಸಿಡಿಸುವ ಸ್ಥಳದಲ್ಲಿ ತುರ್ತು ಸಂದರ್ಭಕ್ಕಾಗಿ ಒಂದು ಬಕೆಟ್‍ನಷ್ಟು ನೀರು ಇಟ್ಟುಕೊಂಡಿರಬೇಕು.
- ಪಟಾಕಿಯಿಂದ ಬೆಂಕಿ ಹರಡುವುದನ್ನು ತಪ್ಪಿಸಲು ಸುಲಭವಾಗಿ ಆ ನೀರನ್ನು ಹಾಕುವಂತಿರಬೇಕು.
- ಗಾಜು ಅಥವಾ ಲೋಹದ ಕಂಟೇನರ್ಗಳಲ್ಲಿ ಪಟಾಕಿ ಹಚ್ಚಬಾರದು.
- ಸರಿಯಾಗಿ ಹತ್ತದ ಪಟಾಕಿಗಳನ್ನು ಮತ್ತೆ ಹಚ್ಚಲು ಪ್ರಯತ್ನಿಸಬಾರದು.
- ಅಂತಹ ಪಟಾಕಿಗಳನ್ನು ನೀರಿನಲ್ಲಿ ನೆನಸಿ ವಿಲೇವಾರಿ ಮಾಡಬೇಕು.
ರಾಕೆಟ್‍ಗಳು ಮತ್ತು ಬಾಂಬ್‍ನಂತಹ ದೊಡ್ಡ ಮಟ್ಟದಲ್ಲಿ ಸ್ಫೋಟಗೊಳ್ಳುವ ಪಟಾಕಿಗಳು ದೊಡ್ಡ ಮಟ್ಟದ ಗಾಯಗಳನ್ನು ಉಂಟು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಇಂತಹ ಪಟಾಕಿಗಳನ್ನು ಸಿಡಿಸುವುದನ್ನು ನಿಯಂತ್ರಿಸಬೇಕು. ಕೆಲವೊಮ್ಮೆ ಹಾನಿಕಾರವಲ್ಲದ ಪಟಾಕಿಗಳು ಎಂದೆನಿಸಿದರೂ ಅವುಗಳು ಸಹ ಅಪಾಯಕಾರಿಯಾಗಿರುತ್ತವೆ. ಇವುಗಳು ಕಣ್ಣಿಗೆ ಗಾಯವನ್ನುಂಟು ಮಾಡುತ್ತವೆ ಮತ್ತು ಸಾವಿಗೂ ಕಾರಣವಾಗುತ್ತವೆ.
ಪಟಾಕಿಗಳಿಂದ ಗಾಯಗೊಂಡಾಗ ಅನುಸರಿಸಬೇಕಾದ ಕ್ರಮಗಳಿವು..
- ವೈದ್ಯರ ಸಲಹೆ ಇಲ್ಲದೆ ಕಣ್ಣಿನ ಡ್ರಾಪ್‍ಗಳನ್ನು ಬಳಸಬಾರದು
- ಕಣ್ಣುಗಳನ್ನು ಉಜ್ಜಬಾರದು
- ಕಣ್ಣುಗಳನ್ನು ನೀರಿನಿಂದ ತೊಳೆಯಬಾರದು
- ಕಣ್ಣುಗಳ ಮೇಲೆ ಒತ್ತಡ ಹಾಕಬಾರದು
- ಕಣ್ಣಿನಲ್ಲಿ ಸಿಕ್ಕಿಕೊಂಡಿರುವ ಯಾವುದೇ ವಸ್ತುವನ್ನು ಬಲವಂತವಾಗಿ ಹೊರ ತೆಗೆಯಲು ಪ್ರಯತ್ನಿಸಬಾರದು.