ಕರ್ನಾಟಕ

karnataka

ETV Bharat / state

ಬ್ಯಾಂಕ್​​ಗಳ ಸಾಲ ವಸೂಲಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸುವವರು ಈಗೇನು ಮಾಡುತ್ತಿದ್ದಾರೆ ಗೊತ್ತಾ!? - bank employees time

ಲಾಕ್​ಡೌನ್​ ಹೇರಿಕೆಯಿಂದ ಆದ ಹಾನಿ ಅಷ್ಟಿಷ್ಟಲ್ಲ. ಎಲ್ಲ ಕ್ಷೇತ್ರಕ್ಕೂ ಈ ಲಾಕ್​ಡೌನ್​ ಬಿಸಿ ತಟ್ಟಿದೆ. ಹಾಗಾದರೆ ಈ ಸಮಯದಲ್ಲಿ ಬ್ಯಾಂಕ್​​ಗಳಲ್ಲಿ ಸಾಲ ವಸೂಲಾತಿ ಕಾರ್ಯನಿರ್ವಹಿಸುವವರು ಏನು ಕೆಲಸ ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ನಿಮಗೂ ಕಾಡಿರಬಹುದಲ್ವಾ?

bank employees
ಸಂಗ್ರಹ ಚಿತ್ರ

By

Published : May 9, 2020, 11:08 PM IST

ಬೆಂಗಳೂರು:ಸಾಲ ವಸೂಲು ಮಾಡಲು ಗ್ರಾಹಕರಿಗೆ ಕರೆ ಮಾಡುವಂತಿಲ್ಲ. ಮಾಡಿದರೆ ದೂರು ಕೊಡಬಹುದು. ಹಾಗಾದರೆ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳಲ್ಲಿ ಸಾಲ ವಸೂಲಾತಿ ವಿಭಾಗದಲ್ಲಿರುವವರು ಏನು ಕೆಲಸ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಮೂಡುವುದು ಸಹಜ.

ಸಾಮಾನ್ಯವಾಗಿ ಎಂಬಿಎ ಪದವೀಧರರು, ಬಿಕಾಂ, ಎಂಕಾಂ ಪದವೀಧರರು ಕೂಡ ಇಂದು ವಿವಿಧ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಸಿಕವಾಗಿ 10-12 ಸಾವಿರ ರೂ.ಗೆ ಕೂಡ ದುಡಿಯುವವರಿದ್ದಾರೆ. ಇನ್ನು ಕೆಲವರಿಗೆ ಹೆಚ್ಚಿನ ಹಣ ವಸೂಲಿ ಮಾಡಿದರೆ, ಹೊಸ ಗ್ರಾಹಕರನ್ನು ಹುಡುಕಿ ತಂದರೆ ಕಮೀಷನ್ ಸಿಗುತ್ತದೆ. ಅಲ್ಲದೇ ಕೆಲವರು ಕ್ರೆಡಿಟ್ ಕಾರ್ಡ್ ಮಾರಾಟ ಮಾಡುವ, ಹಣ ವಸೂಲಿ ಮಾಡುವ ಕೆಲಸ ಕೂಡ ಮಾಡುತ್ತಿದ್ದಾರೆ.

ಸಂಗ್ರಹ ಚಿತ್ರ

ಆದರೆ ಇವರಲ್ಲಿ ಹಲವರು ಕಳೆದ 4-5 ದಿನದಿಂದ ಮಾತ್ರ ಆಚೆ ಬರುತ್ತಿದ್ದಾರೆ. ಇದುವರೆಗೂ ಅವರಿಗೆ ಸುತ್ತಾಡಲು ಬಸ್ ಇರಲಿಲ್ಲ, ಆಟೋ, ಟ್ಯಾಕ್ಸಿ ಸಿಗುತ್ತಿರಲಿಲ್ಲ, ಮೆಟ್ರೋ ರೈಲಂತೂ ಮೊದಲೇ ಇಲ್ಲ. ಸ್ವಂತ ಬೈಕ್ ಮೇಲೆ ತೆರಳಲು ಪಾಸ್ ಇರಲಿಲ್ಲ. ಎಲ್ಲರದ್ದೂ ವರ್ಕ್ ಫ್ರಂ ಹೋಂ ಆಗಿತ್ತು. ಅಂದಹಾಗೆ ಮನೆಯಲ್ಲಿ ಕುಳಿತು ಸಾಲ ವಸೂಲಿ ಹೇಗೆ ಸಾಧ್ಯ? ಅಂದಹಾಗೆ ಇವರನ್ನು ಸುಮ್ಮನೆ ಕೂರಿಸಿ ಹಣ ಕೊಡಲು ಬ್ಯಾಂಕ್ ಹಾಗೂ ಕಂಪನಿಗೆ ಇಷ್ಟವಿಲ್ಲ. ಕೆಲವರಿಗೆ ಲಾಕ್​ಡೌನ್​ ತೆರವಾದ ಮೇಲೆ ಬನ್ನಿ, ಅಲ್ಲಿಯವರೆಗೆ ಸಂಬಳ ಸಿಗಲ್ಲ ಎನ್ನಲಾಗಿದೆ.

ಮತ್ತೆ ಕೆಲವರನ್ನು ಕೆಲಸದಿಂದಲೇ ತೆಗೆಯಲಾಗಿದೆ. ಉಳಿದ ಕೆಲವರು ಮನೆಯಿಂದ ಕೆಲಸ ಮಾಡುತ್ತಿದ್ದು, ಸಾಲ ಪಾವತಿ ಬಗ್ಗೆ ಜನರಲ್ಲಿ ಮಾಹಿತಿ ನೀಡುವ, ಸಾಲದ ಕಂತು ಪಾವತಿಸುವವರಿಗೆ ಮಾರ್ಗದರ್ಶನ ನೀಡುವ, ಹೊಸದಾಗಿ ಸಾಲ ಪಡೆಯಲು ಬಯಸುವ ಗ್ರಾಹಕರಿಗೆ ವಿವರ ನೀಡುವ, ಈಗಾಗಲೇ ಸಾಲ ಪಡೆದಿರುವ ಗ್ರಾಹಕರು ಹೇಗಿದ್ದಾರೆ? ಎಲ್ಲಿದ್ದಾರೆ ಎಂದು ವಿಚಾರಿಸಿ ವಿಳಾಸವನ್ನು ಮತ್ತೆ ಪಕ್ಕಾ ಮಾಡಿಕೊಳ್ಳುವ ಹಾಗೂ ಹೊಸದಾಗಿ ಕ್ರೆಡಿಟ್ ಕಾರ್ಡ್ ಪಡೆಯಿರಿ, ನಿಮ್ಮ ಪರ್ಫಾರ್ಮೆನ್ಸ್ ಚೆನ್ನಾಗಿದೆ, ವೈಯಕ್ತಿಕ ಸಾಲ ಕೊಡುತ್ತೇವೆ, ಕಡಿಮೆ ಬಡ್ಡಿ ಎಂದು ಜನರಿಗೆ ಮನವರಿಕೆ ಮಾಡುವ ಕಾರ್ಯ ಮಾಡುತ್ತಿದ್ದಾರೆ.

ಸಂಗ್ರಹ ಚಿತ್ರ

ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ನಮಗೆ ಪಕ್ಕಾ ಅನ್ವಯಿಸುತ್ತದೆ. ಚೆನ್ನಾಗಿ ಮಾತನಾಡುವ ಕಲೆ ಇರುವವರು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಅದರಲ್ಲೂ ಸಾಲ ವಸೂಲು, ನೀಡಿಕೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬಹುದು. ನಿಜಕ್ಕೂ ಇಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಜನ ರೇಗಾಡಿದರೂ ಸಹಿಸಿಕೊಳ್ಳುವ ತಾಳ್ಮೆ ಬೇಕು. ಲಾಕ್​​ಡೌನ್ ಹಿನ್ನೆಲೆ ಅರ್ಧದಷ್ಟು ಮಂದಿ ನಮ್ಮಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಉಳಿದಿರುವ ನಾವು ಜನರಿಗೆ ಕರೆ ಮಾಡಿ ಅವರ ವಿಳಾಸ ಪಕ್ಕಾ ಮಾಡಿಕೊಳ್ಳುವ, ಫೋನ್ ಕಾಲ್ ಮೂಲಕವೇ ಜನರಿಗೆ ಕ್ರೆಡಿಟ್ ಕಾರ್ಡ್, ಹೊಸ ಸಾಲದ ವಿವರ ನೀಡುವ ಕಾರ್ಯ ಮಾಡುತ್ತಿದ್ದೇವೆ. ನೇರವಾಗಿ ಭೇಟಿಯಾಗಿ ಮಾತನಾಡುವುದಕ್ಕೆ ಹೋಲಿಸಿದರೆ ಇಲ್ಲಿ ಶೇ. 30ರಷ್ಟು ಮಾತ್ರ ಸಫಲತೆ ಇದೆ. ಆದರೂ ಕೆಲಸ ಮಾಡಲೇಬೇಕಿದೆ. ಎಷ್ಟು ದಿನ ಈ ಕೆಲಸ ಉಳಿಯಲಿದೆ ಎಂಬ ಬಗ್ಗೆ ಖಾತ್ರಿ ಇಲ್ಲ ಎನ್ನುತ್ತಾರೆ ಜಯನಗರದ ಖಾಸಗಿ ಹಣಕಾಸು ಸಂಸ್ಥೆಯೊಂದರ ಉದ್ಯೋಗಿ ವಿಜಯ್ ಕುಮಾರ್.

ಮನೆಯಲ್ಲಿ ಕುಳಿತು ಕೆಲಸ ಮಾಡುವುದು ಬಹಳ ಕಷ್ಟ. ಗ್ರಾಹಕರ ಪ್ರತಿಯೊಂದು ಅನುಮಾನಗಳನ್ನೂ ದೂರವಾಣಿಯಲ್ಲಿ ಬಗೆಹರಿಸಲು ಆಗಲ್ಲ. ಕೆಲವೊಮ್ಮೆ ಅವರು ಮಾಹಿತಿ ಕೇಳುತ್ತಾರೆ. ನಮ್ಮ ಬಳಿ ಇದ್ದರೂ ವಿವರಿಸಿದರೂ ಅದು ಅವರಿಗೆ ಅರ್ಥ ಆಗಲ್ಲ. ಉತ್ತರಿಸಿದ ಪ್ರಶ್ನೆಗಳಿಗೇ ಮತ್ತೆ ಮತ್ತೆ ಉತ್ತರ ನೀಡಬೇಕು. ಮುಖತಾ ಭೇಟಿಯಾಗಿ ಮಾತನಾಡುವ ಅವಕಾಶ ಇದ್ದಾಗ ಮನವೊಲಿಕೆ ಸುಲಭ ಎನ್ನುತ್ತಾರೆ ರಾಷ್ಟ್ರೀಕೃತ ಬ್ಯಾಂಕ್ ಒಂದರ ಬಸವನಗುಡಿ ಶಾಲೆಯ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುವ ಶ್ರೀನಿವಾಸ್ ಕುಲಕರ್ಣಿ.

ABOUT THE AUTHOR

...view details