ಬೆಂಗಳೂರು: ರಾಜ್ಯ ಸರ್ಕಾರ ಕೈಗಾರಿಕೆಗಳನ್ನು ಆಕರ್ಷಿಸಲು ವಿವಿಧ ರಿಯಾಯಿತಿಗಳನ್ನು ನೀಡುತ್ತಿದೆ. ಈ ಮೂಲಕ ಕಾರ್ಪೊರೇಟ್ ಕಂಪನಿ, ಕೈಗಾರಿಕೆಗಳಿಗೆ ರಾಜ್ಯದಲ್ಲಿ ಪೂರಕ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದೆ. 2021-22ರಲ್ಲಿ ರಾಜ್ಯ ಸರ್ಕಾರ ಹಲವು ಕಂಪನಿಗಳಿಗೆ 1,004 ಕೋಟಿ ರೂ. ಮೊತ್ತದ ರಿಯಾಯಿತಿಯನ್ನು ನೀಡಿದೆ.
ರಾಜ್ಯಕ್ಕೆ ಕೈಗಾರಿಕೆಗಳನ್ನು ಆಕರ್ಷಿಸಲು ವಿವಿಧ ರಿಯಾಯಿತಿಗಳನ್ನು ನೀಡಬೇಕಾಗುತ್ತದೆ. ಈ ಮೂಲಕ ರಾಜ್ಯವನ್ನು ಹೆಚ್ಚಿನ ಹೂಡಿಕೆ ತಾಣವಾಗಿ ಮಾಡುವುದು ಸರ್ಕಾರಗಳ ನೀತಿ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವ್ಯಾಪಾರ ನಿರ್ಬಂಧ ಅಭಿಯಾನ ಸುದ್ದಿಗೆ ಗ್ರಾಸವಾಗಿದೆ. ಅಲ್ಪಸಂಖ್ಯಾತರ ವ್ಯಾಪಾರಿಗಳನ್ನು ಬಹಿಷ್ಕರಿಸುವ ಹಿಂದೂ ಪರ ಸಂಘಟನೆಗಳ ಅಭಿಯಾನ ರಾಜ್ಯದ ಕೈಗಾರಿಕೋದ್ಯಮಿಗಳಲ್ಲಿ ಆತಂಕವನ್ನೂ ಮೂಡಿಸಿದೆ. ಈ ನಿಟ್ಟಿನಲ್ಲಿ ಉದ್ಯಮಿ ಕಿರಣ್ ಮಜುಂದಾರ್ ಶಾ ಟ್ವೀಟ್ ಮೂಲಕ ತಮ್ಮ ಆತಂಕ ವ್ಯಕ್ತಪಡಿಸಿದ್ದರು. ಇತ್ತ ಹೈದರಾಬಾದ್‌ಗೆ ಬರುವಂತೆ ಸ್ಟಾರ್ಟಪ್‌ಗಳಿಗೆ ತೆಲಂಗಾಣ ಸಚಿವ ಕೆ.ಟಿ. ರಾಮರಾವ್ (ಕೆ.ಟಿ.ಆರ್) ಆಹ್ವಾನ ನೀಡಿರುವುದು ಸಾಕಷ್ಟು ಆಕ್ರೋಶಕ್ಕೂ ಕಾರಣವಾಗಿದೆ.
ಕರ್ನಾಟಕ ಐಟಿ, ಬಿಟಿ, ಸ್ಟಾರ್ಟ್ ಅಫ್ ಸೇರಿ ಕೈಗಾರಿಕೋದ್ಯಮಿಗಳಿಗೆ ಹೂಡಿಕೆಗೆ ನೆಚ್ಚಿನ ತಾಣವಾಗಿದೆ. ಕರ್ನಾಟಕವನ್ನು ಹೂಡಿಕೆ ಸ್ನೇಹಿಯಾಗಿಸಲು ರಾಜ್ಯ ಸರ್ಕಾರವೂ ನಾನಾ ಕಸರತ್ತು ಮಾಡುತ್ತಿರುತ್ತದೆ. ಇದರ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಪೊರೇಟ್ ಕಂಪನಿ, ಘಟಕಗಳಿಗೆ ವಿವಿಧ ರಿಯಾಯಿತಿಗಳನ್ನು ನೀಡುತ್ತಿದೆ. 2021-22 ಸಾಲಿನಲ್ಲಿ ಹಲವು ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ಕೋಟ್ಯಂತರ ರೂ. ಮೊತ್ತದ ರಿಯಾಯಿತಿಗಳನ್ನು ನೀಡಿದೆ.
1,004 ಕೋಟಿ ರೂ. ರಿಯಾಯಿತಿ:2021-22 ಸಾಲಿನಲ್ಲಿ ಸರ್ಕಾರ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಕೈಗಾರಿಕಾ ಘಟಕಗಳಿಗೆ ರಿಯಾಯಿತಿ ನೀಡಿದೆ. ಮುಖ್ಯವಾಗಿ ವ್ಯಾಟ್ ಮರುಪಾವತಿ, ಕೇಂದ್ರ ಮಾರಾಟ ತೆರಿಗೆ ಮರುಪಾವತಿ, ಬಡ್ಡಿರಹಿತ ವ್ಯಾಟ್ ಸಾಲ, ಬಡ್ಡಿರಹಿತ ಎಸ್ಜಿಎಸ್ಟಿ ಸಾಲ ನೀಡುವ ಮೂಲಕ ಕೈಗಾರಿಕಾ ಘಟಕಗಳಿಗೆ ತೆರಿಗೆ ರಿಯಾಯಿತಿ ನೀಡಿದೆ.