ಬೆಂಗಳೂರು:ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಿದೆ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ. ನಾವು ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುತ್ತೇವೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಗೆ ಮಾತ್ರ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಂತಹ ನಾಯಕರು ಸಿಗೋದು. ಅವರಿಗೆ ರಾಜ್ಯದಲ್ಲಿ ದೇವ ದುರ್ಲಭ ಸ್ವಾಗತ ಸಿಕ್ಕಿದೆ. ನಾಲ್ಕು ತಂಡಗಳಲ್ಲಿ ವಿಜಯ ಸಂಕಲ್ಪ ರಥಯಾತ್ರೆ ಮಾಡಿದಾಗ, ಜನ ಸೇರಿದ್ದನ್ನು ನೋಡಿ ಕಾಂಗ್ರೆಸ್ನವರು ದಿಗ್ಭ್ರಮೆಗೊಂಡಿದ್ದಾರೆ. ನಾನು ಈಗಾಗಲೇ ಅಮಿತ್ ಶಾ ಅವರ ಜೊತೆ ಮಾತಾಡಿದ್ದೇನೆ. ನಮ್ಮೆಲ್ಲ ನಾಯಕರು ಜಿಲ್ಲೆಯಲ್ಲಿ ಇದ್ದು, ಚುನಾವಣೆ ಮುಗಿಯವವರೆಗೂ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.
ದೇಶದ ಇತಿಹಾಸದಲ್ಲೇ ನಮ್ಮ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯದಡಿ ಮೀಸಲಾತಿ ಮಾಡಿದ್ದಾರೆ. ಎಲ್ಲ ವರ್ಗದವರಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಲಂಬಾಣಿ, ತಾಂಡಾ ಅಭಿವೃದ್ಧಿ ನಿಗಮವನ್ನು ನಾನು ಅಧಿಕಾರದಲ್ಲಿ ಇದ್ದಾಗ ಮಾಡಿದ್ದೆ. ಬಹುಶಃ ನನಗೆ ಅತ್ಯಂತ ಸಮಧಾನ ತಂದಿರೋದು ಭಾಗ್ಯಲಕ್ಷ್ಮಿ ಯೋಜನೆ. ಇನ್ನು ಆರು ತಿಂಗಳಲ್ಲಿ ಆ ಯೋಜನೆಯ ಸವಲತ್ತು ಸಿಗಲಿದೆ. ಬೈಸಿಕಲ್ ಯೋಜನೆ ಕೊಟ್ಟಿದ್ದು, ರೈತರಿಗೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಕೊಟ್ಟಿದ್ದು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದು ವಿವರಿಸಿದರು.
ಶೀಘ್ರವೇ ಅಭ್ಯರ್ಥಿಗಳು ಯಾರು ಎಂದು ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಚುನಾವಣೆ ಮುಗಿಯವರೆಗೂ ನಾನೂ ಸೇರಿ ಎಲ್ಲರೂ ಇಡೀ ರಾಜ್ಯ ಪ್ರವಾಸ ಮಾಡುತ್ತೇವೆ. ನಾನು ಹಿಂದೆ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆಲ್ಲುವ ಮಾತು ಹೇಳಿದ್ದೆ, ಅದರಂತೆ 25 ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಬಹುದೊಡ್ಡ ಆಶೀರ್ವಾದವನ್ನು ಜನರು ಮಾಡಿದ್ದಾರೆ. ಅದೇ ರೀತಿ ಅಷ್ಟೇ ಪ್ರಮಾಣದಲ್ಲಿ ಈ ಚುನಾವಣೆಯಲ್ಲಿ ಕೂಡ ಜನರ ಆಶೀರ್ವಾದ ನಮಗೆ ಸಿಗುತ್ತದೆ. ವಿಜಯ ಸಂಕಲ್ಪ ರಥಯಾತ್ರೆ ಮೂಲಕ ಇಡೀ ರಾಜ್ಯದಲ್ಲಿ ಬಿಜೆಪಿ ಪರವಾದ ಗಾಳಿ ಬೀಸಿದೆ. ಜನರ ಒಲವು ಬಿಜೆಪಿ ಪರವಾಗಿ ಇದೆ ಎಂದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದರು.