ಆನೇಕಲ್:ಸಮಾಜದಲ್ಲಿ ಪರಸ್ಪರ ಪ್ರೀತಿ, ಕರುಣೆ, ಸೌಹಾರ್ದತೆ ಸಾರುವ ಹಣತೆಗಳನ್ನು ಹಚ್ಚಿ ಆಚರಿಸುವ ದೀಪಗಳ ಹಬ್ಬದಂದು ಅಬ್ಬರದ ಪಟಾಕಿ ಸಿಡಿಸಿ ಅಪಾಯ ಮೈಮೇಲೆ ಹೇರಿಕೊಳ್ಳುವುದು ನಿಲ್ಲಲಿ ಎಂದು ರೆಫಾ ಐವನ್ ಮೆಂಡೋನ್ಸಾ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.
ದೀಪಗಳ ಹಬ್ಬದಲ್ಲಿ ಪಟಾಕಿಯ ಸಿಡಿತ ಬೇಡ - ಸಂತ ಜೋಸೆಫ್ ಪದವಿ ಪೂರ್ವ ಕಾಲೇಜ್
ಆನೇಕಲ್ನ ಸಂತ ಜೋಸೆಫ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ದೀಪಾವಳಿ ಹಬ್ಬವನ್ನು ಆಚರಿಸಿದ್ದು, ಸಹಜ ಪ್ರೇಮ-ಪ್ರೀತಿ, ಸಹಬಾಳ್ವೆ ಬೆಸೆಯುವ ಬೆಳಕಿನ ದೀವಿಗೆ ಹಚ್ಚುವ ದೀಪಗಳ ಹಬ್ಬದಲ್ಲಿ ಪಟಾಕಿಯ ಸಿಡಿತ ಬೇಡ ಎಂದು ಕಾಲೇಜಿನ ಮುಖ್ಯಸ್ಥ ರೆಫಾ ಐವನ್ ಮೆಂಡೋನ್ಸಾ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
![ದೀಪಗಳ ಹಬ್ಬದಲ್ಲಿ ಪಟಾಕಿಯ ಸಿಡಿತ ಬೇಡ](https://etvbharatimages.akamaized.net/etvbharat/prod-images/768-512-4881181-thumbnail-3x2-bng.jpg)
ಪಟ್ಟಣದ ಸಂತ ಜೋಸೆಫ್ ಪದವಿ ಪೂರ್ವ ಕಾಲೇಜಿನಲ್ಲಿ ದೀಪಾವಳಿ ಹಬ್ಬವನ್ನು ವಿದ್ಯಾರ್ಥಿಗಳೊಡನೆ ಆಚರಿಸಿ ಮಾತನಾಡಿದ ಅವರು, ಅಪಾಯಕಾರಿ ಪಟಾಕಿಗಳ ದುಷ್ಪರಿಣಾಮಗಳನ್ನು ಮೈಮೇಲೆ ಹೇರಿಕೊಳ್ಳುವುದು ನಿಲ್ಲಲಿ. ದೀಪಾವಳಿ ಎಂದರೆ ದೀಪಗಳೇ ಹೊರತು ಪಟಾಕಿ ಹಬ್ಬವಲ್ಲ. ಧನಾತ್ಮಕ ಶಕ್ತಿಯನ್ನು ನೀಡುವುದರ ಮೂಲಕ ಋಣಾತ್ಮಕ ಶಕ್ತಿಯನ್ನು ಹೊಡೆದೋಡಿಸುವ ಹಬ್ಬವಾಗಿದೆ ಎಂದು ದೀಪಾವಳಿಯ ಮಹತ್ವವನ್ನು ತಿಳಿಸಿಕೊಟ್ಟರು.
ಪ್ರಾಂಶುಪಾಲ ಕೃಷ್ಣಮೂರ್ತಿ ಎಂ. ಮಾತನಾಡಿ, ದೀಪಾವಳಿ ದೀಪಗಳ ಹಬ್ಬವಾಗಿದ್ದು ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕಿನ ಮೂಲಕ ಪ್ರೀತಿ, ಸ್ನೇಹ, ಶಾಂತಿ, ಸೌಹಾರ್ದತೆ, ಭಾವೈಕ್ಯೆತೆ ಮತ್ತು ಸಮೃದ್ಧಿಯನ್ನು ನೀಡುವ ದ್ಯೋತಕವಾಗಿದೆ ಎಂದರು.