ಬೆಂಗಳೂರು:ರಾಜ್ಯದಲ್ಲಿ ಪ್ರತಿ ಯೂನಿಟ್‌ಗೆ ವಿದ್ಯುತ್ ಬಳಕೆಗೆ ಸರಾಸರಿ 1.58 ರೂ. ದರ ಹೆಚ್ಚಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಎಸ್ಕಾಂಗಳು ಸಲ್ಲಿಸಿರುವ ಪ್ರಸ್ತಾವನೆ ಹಿಂಪಡೆಯಬೇಕು. ಅದರಲ್ಲೂ ಸಣ್ಣ ಕೈಗಾರಿಕೆಗಳಿಗೆ ಯಾವುದೇ ಕಾರಣಕ್ಕೂ ವಿದ್ಯುತ್ ದರ ಹೆಚ್ಚಳ ಮಾಡಬಾರದು ಎಂದು ಸರ್ಕಾರಕ್ಕೆ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಮನವಿ ಮಾಡಿದೆ.
ಸಿಎಂ ಬೊಮ್ಮಾಯಿ ಸದ್ಯಕ್ಕೆ ದರ ಹೆಚ್ಚಳವಿಲ್ಲ ಎಂದು ಹೇಳಿದ್ದರೂ ವಿದ್ಯುತ್ ಸರಬರಾಜು ಕಂಪನಿಗಳು ಪಟ್ಟು ಸಡಿಲಿಸುತ್ತಿಲ್ಲ. ಮೇಲ್ಮನವಿಗೆ ಸಜ್ಜಾಗಿವೆ ಎನ್ನುವ ಮಾಹಿತಿ ಇದೆ. ಒಂದೂವರೆ ವರ್ಷದಿಂದ ಕೋವಿಡ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಹಿನ್ನೆಲೆ ಲಾಕ್‌ಡೌನ್ ಮತ್ತು ಕರ್ಪ್ಯೂ ಹೇರಿಕೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶೇ.20ಕ್ಕೂ ಅಧಿಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿವೆ.
ಆರ್ಥಿಕ ಸಂಕಷ್ಟವನ್ನೂ ಲೆಕ್ಕಿಸದೇ ಕಳೆದ ವರ್ಷ 3 ಬಾರಿ ವಿದ್ಯುತ್ ದರ ಹೆಚ್ಚಿಸಲಾಗಿದೆ. ಕೋವಿಡ್ 3ನೇ ಅಲೆ ಕಾಣಿಸಿಕೊಂಡು, ಚೇತರಿಕೆ ಕಾಣುತ್ತಿರುವ ಕೈಗಾರಿಕೆಗಳಿಗೆ ಕಾರ್ಮಿಕರ ಕೊರತೆ ಕಾಡುತ್ತಿದೆ ಎಂದಿದೆ.