ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ತಮಗೆ ಆದ ಅನ್ಯಾಯದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ಹೊರಹಾಕಿದರು.
ಕಳೆದ ಲೋಕಸಭೆ ಚುನಾವಣೆ ವೇಳೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಪಕ್ಷಕ್ಕೆ ದೊಡ್ಡಮಟ್ಟದ ಹಿನ್ನಡೆ ಉಂಟಾಯಿತು. ಬಹಿರಂಗವಾಗಿ ನಮ್ಮೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಪರೋಕ್ಷವಾಗಿ ಬಿಜೆಪಿಗೆ ಅನುಕೂಲವಾಗುವಂತೆ ನಡೆದುಕೊಂಡು ನಮ್ಮ ಸಂಸದರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವಂತೆ ಮಾಡಿತು. ಯಾವುದೇ ಕಾರಣಕ್ಕೂ ಮುಂದೆ ನಾವು ಜೆಡಿಎಸ್ ಸಖ್ಯ ಬೆಳೆಸಬಾರದು. ಈ ಹಿಂದೆ ಮಾಡಿಕೊಂಡ ಮೈತ್ರಿಯಿಂದಲೇ ಪಕ್ಷಕ್ಕೆ ದೊಡ್ಡಮಟ್ಟದ ಹಾನಿ ಉಂಟಾಗಿದ್ದು, ಏಕಾಂಗಿಯಾಗಿ ಸ್ಪರ್ಧೆಯನ್ನು ಮಾಡುವತ್ತ ಗಮನ ಹರಿಸಬೇಕು ಎಂದು ವಿವರಿಸಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ಮೇಟಿ ಮೊಮ್ಮಗನ ಆರತಕ್ಷತೆಯಲ್ಲಿ ಸಿದ್ದರಾಮಯ್ಯ-ರಮೇಶ್ ಜಾರಕಿಹೊಳಿ ಆಪ್ತ ಸಮಾಲೋಚನೆ
ಸಭೆಯಲ್ಲಿ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ಲೋಕಸಭಾ ಚುನಾವಣೆಯಲ್ಲಿ 15 ಸೀಟ್ ಗೆಲ್ಲಬಹುದಾಗಿತ್ತು. ಆದರೆ, ಮೈತ್ರಿ ಮಾಡಿಕೊಂಡು ನಾವು ಸೋಲೊಪ್ಪಿದೆವು. ಜಿಟಿ ದೇವೇಗೌಡ ನಮ್ಮಿಂದಲೇ ಹಣ ಪಡೆದು ಬಿಜೆಪಿ ಪರ ಕೆಲಸ ಮಾಡಿದ. ಜೆಡಿಎಸ್ನವರಿಗೆ ನಮಗಿಂತ ಬಿಜೆಪಿ ಪರವೇ ಒಲವು ಎಂಬ ಗಂಭೀರ ಆರೋಪವನ್ನು ಕೂಡ ಮಾಡಿದ್ದಾರೆ ಎಂಬ ಮಾಹಿತಿ ಇದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 21 ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ 7 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆದರೆ, ಕಾಂಗ್ರೆಸ್ನಿಂದ ಡಿಕೆ ಸುರೇಶ್ ಹಾಗೂ ಜೆಡಿಎಸ್ನಿಂದ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿದ್ದರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಮೈತ್ರಿಗೆ ಹಿನ್ನಡೆ ಉಂಟಾಗಿತ್ತು. ಮೈತ್ರಿ ಮಾಡಿಕೊಂಡ ದಿನದಿಂದಲೂ ಫಲಿತಾಂಶ ಬಂದ ನಂತರವೂ ಸೇರಿದಂತೆ ಇದುವರೆಗೂ ಕಾಂಗ್ರೆಸ್ ನಾಯಕರು ಮೈತ್ರಿ ಮಾಡಿಕೊಂಡಿದ್ದನ್ನು ಖಂಡಿಸುತ್ತಾ ಬಂದಿದ್ದರು. ಇಂದಿನ ಮಹತ್ವದ ಸಭೆಯಲ್ಲಿ ಕೂಡ ಇದೆ ವಿಚಾರ ಚರ್ಚೆಯಾಯಿತು.
ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ಧ ಸೆಡ್ಡು ಹೊಡೆಯುವ ರೀತಿ ಕಾಂಗ್ರೆಸ್ ಪಕ್ಷವನ್ನು ರೂಪಿಸಲು ಯಾವುದೇ ಕಾರಣಕ್ಕೂ ಏಕಾಂಗಿಯಾಗಿ ಹೋಗುವುದೇ ಉತ್ತಮ. ಜೆಡಿಎಸ್ ಸೇರಿದಂತೆ ಯಾವ ಪಕ್ಷದ ಜೊತೆಗೂ ಮೈತ್ರಿ ಬೇಡ ಎಂಬ ಅಭಿಪ್ರಾಯವನ್ನು ಇಂದಿನ ಸಭೆಯಲ್ಲಿ ಎಲ್ಲಾ ನಾಯಕರು ವ್ಯಕ್ತಪಡಿಸಿದರು. ಜೆಡಿಎಸ್ ಯಾವುದೇ ಕಾರಣಕ್ಕೂ ನಂಬಿಕೆಗೆ ಅರ್ಹವಾದ ಪಕ್ಷವಲ್ಲ ಎಂಬ ಅಭಿಪ್ರಾಯ ಕೂಡ ಮೂಡಿಬಂತು.
ಇದನ್ನೂ ಓದಿ: ಸುಳ್ಳು ಹೇಳುವುದರಲ್ಲಿ ಯಡಿಯೂರಪ್ಪ ಚಿಕ್ಕ ನರೇಂದ್ರ ಮೋದಿ ಇದ್ದಂತೆ: ಸಿದ್ದರಾಮಯ್ಯ
ಈ ಸಂದರ್ಭ ಮಾತನಾಡಿದ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಜೆಡಿಎಸ್ ನಮಗೆ ಅನುಕೂಲಕರವಾಗುವ ಪಕ್ಷವಾಗಿ ಲಭಿಸುವುದಿಲ್ಲ. ಮೈತ್ರಿ ಮಾಡಿಕೊಂಡು ನಾವು ಕಳೆದುಕೊಂಡದ್ದೇ ಸಹ. ಇನ್ನೊಮ್ಮೆ ಆ ಪಕ್ಷದ ಸಹವಾಸ ಮಾಡುವುದು ಬೇಡ ಎಂದು ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಿರಿಯ ನಾಯಕರ ಸಭೆ ಸಿದ್ದರಾಮಯ್ಯ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು ಮೌನ ವಹಿಸಿದರೆ ಉಳಿದ ನಾಯಕರು ಬೆಂಬಲಿಸಿ, ಇವರ ತೀರ್ಮಾನ ಸರಿ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.