ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ವಿರುದ್ಧ ಗುಡುಗಿದ್ದಾರೆ. ಒಂದೇ ಕುಟುಂಬಕ್ಕೆ ಎಂಎಲ್ಎ, ನಿಗಮ, ಎಂಪಿ, ರಾಜ್ಯಸಭಾ, ಪಕ್ಷದ ಜವಾಬ್ದಾರಿ ಎಲ್ಲವೂ ಕೊಡಬಾರದು ಎಂದು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಂದಿನ ದಿನದಲ್ಲಿ ಒಂದು ಕುಟುಂಬದಲ್ಲಿ ಒಬ್ಬರಿಗೇ ಅಧಿಕಾರ ಕೊಡಬೇಕು ಅಂತಾ ನಾನು ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಈ ಬಗ್ಗೆ ನಾನು ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯುತ್ತೇನೆ. ವಂಶ ಪಾರಂಪರ್ಯ ಅಂತ್ಯ ಆಗಬೇಕು. ಭ್ರಷ್ಟಾಚಾರ ಮುಕ್ತ ಸರ್ಕಾರ ಕೊಡಬೇಕು ಅನ್ನೋದು ಪ್ರಧಾನಿ ಕನಸು. ಆದ್ರೆ ಸಿಎಂ ಮನೆಯವರೇ ಎಲ್ಲಾ ಹುದ್ದೆಯಲ್ಲಿ ಇದ್ದಾರೆ ಅಂತ ನಾನು ಹೇಳುತ್ತಿದ್ದೇನೆ. ಒಂದೇ ಕುಟುಂಬದ ಸದಸ್ಯರು ಜಾಸ್ತಿ ಹುದ್ದೆಯಲ್ಲಿ ಇದ್ರೆ, ಎಲ್ಲವನ್ನೂ ಕಟ್ ಮಾಡಿ ಒಂದೇ ಹುದ್ದೆ ಕೊಡಬೇಕು. ಉಳಿದವನ್ನು ಕಾರ್ಯಕರ್ತರಿಗೆ ಬಿಟ್ಟುಕೊಡಬೇಕು. ಕಾರ್ಯಕರ್ತರು ಏನು ಇವರನ್ನು ತಲೆ ಮೇಲೆ ಹೊತ್ತು ಅಡ್ಡಾಡಲು ಮಾತ್ರ ಇದ್ದಾರಾ? ಕಾರ್ಯಕರ್ತರನ್ನು ಸಮರ್ಥವಾಗಿ ಬೆಳೆಸಿ. ಇದರಲ್ಲಿ ನನಗೆ ಏನು ವೈಯಕ್ತಿಕ ಲಾಭ ಇಲ್ಲ. ಮಂತ್ರಿ ಆಗಬೇಕು ಅಂತಾನೂ ಅಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಶಾಸಕರ ಪ್ರತ್ಯೇಕ ಸಭೆಗಳ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರ್ಯಾರು ಯಾವ್ಯಾವ ಸಭೆ ನಡೆಸುತ್ತಿದ್ದಾರೆ ಅಂತಾ ಗೊತ್ತಿಲ್ಲ. ಸಿಡಿ ವಿಚಾರವನ್ನು ಯಾರು ಓಪನ್ ಮಾಡಿದ್ರೋ ಅವರೇ ಕ್ಲೋಸ್ ಮಾಡಬೇಕು. ನಾನು ಓಪನ್ ಮಾಡಿದವನೂ ಅಲ್ಲ, ಕ್ಲೋಸ್ ಮಾಡಿದವನೂ ಅಲ್ಲ. ಯಾರು ಸಮಾಧಾನ ಮಾಡಿದ್ದಾರೋ ಗೊತ್ತಿಲ್ಲ. ಎಲ್ಲರನ್ನೂ ಸಮಾಧಾನ ಮಾಡುವ ಶಕ್ತಿ ಒಂದು ಇದೆ, ಆ ಶಕ್ತಿ ಕೆಲಸ ಮಾಡುತ್ತದೆ. ವಿಚಾರ, ವಿವಾದ ಏನೂ ಕೂಡ ತಣ್ಣಗಾಗಿಲ್ಲ. ನಾನು ತಣ್ಣಗೂ ಆಗಲ್ಲ, ಬೆಚ್ಚಗೂ ಆಗಲ್ಲ, ಅಂಜುವುದೂ ಇಲ್ಲ. ನಮ್ಮ ಧಾಟಿ ಹಾಗೆಯೇ ಇರುತ್ತದೆ. ನಾನು ಎಲ್ಲಿ ಯಾವಾಗ ಏನು ಮಾತಾಡಬೇಕೋ ಅದನ್ನು ಮಾತಾಡುತ್ತೇನೆ ಎಂದು ಗುಡುಗಿದರು.
ಓದಿ:ರಾಜಭವನ ಚಲೋ: ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್..!