ಕರ್ನಾಟಕ

karnataka

ETV Bharat / state

ನ್ಯಾಯಾಲಯದ ಅನುಮತಿ ಇಲ್ಲದೆ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಬೇಡಿ: ಹೈಕೋರ್ಟ್ - ಈಟಿವಿ ಭಾರತ ಕನ್ನಡ

108 ತುರ್ತು ಆಂಬ್ಯುಲೆನ್ಸ್ ಸೇವೆ ಗುತ್ತಿಗೆ ಪ್ರಕ್ರಿಯೆಯನ್ನು​ ಕೋರ್ಟ್ ಅನುಮತಿ ಇಲ್ಲದೆ ಅಂತಿಮಗೊಳಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ.

vdo-not-complete-108-ambulance-contract-process-without-permission-of-court-says-high-court
ನ್ಯಾಯಾಲಯದ ಅನುಮತಿ ಇಲ್ಲದೆ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಬೇಡಿ : ಹೈಕೋರ್ಟ್

By

Published : Mar 19, 2023, 6:51 AM IST

ಬೆಂಗಳೂರು : ನ್ಯಾಯಾಲಯದ ಅನುಮತಿ ಪಡೆಯದೇ 108 ತುರ್ತು ವೈದ್ಯಕೀಯ ಸೇವೆಯ (ಆಂಬ್ಯುಲೆನ್ಸ್ ಸೇವೆ) ಗುತ್ತಿಗೆ ಪ್ರಕ್ರಿಯೆ ಅಂತಿಮಗೊಳಿಸದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯಕ್ಕೆ ಹೈಕೋರ್ಟ್ ತಿಳಿಸಿದೆ. ಜಿವಿಕೆ ತುರ್ತು ನಿರ್ವಹಣಾ ಸಂಶೋಧನಾ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಪೀಠ ಈ ಆದೇಶ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿ, "ಜಿವಿಕೆ ಸಂಸ್ಥೆ ಸಲ್ಲಿಸಿರುವ ಅರ್ಜಿ ಕುರಿತು 2017ರ ಆ.21ರಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದ್ದು, ಗುತ್ತಿಗೆ ನೀಡುವ ಮುನ್ನ ನ್ಯಾಯಾಲಯದಿಂದ ಸೂಕ್ತ ಅನುಮತಿ ಪಡೆಯಬೇಕೆಂದು ಹೇಳಿದೆ. ಆ ಅರ್ಜಿ ವಿಚಾರಣೆಗೆ ಬಾಕಿ ಇರುವಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು 2023ರ ಜ.9ರಂದು 108 ಆಂಬ್ಯುಲೆನ್ಸ್​​ ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಸೇವೆ ಒದಗಿಸುವವರ ಆಯ್ಕೆಗೆ ಪ್ರಸ್ತಾವನೆ ಕೋರಿಕೆ ಹೊರಡಿಸಿದೆ. ಅದನ್ನು ಜಾರಿಗೊಳಿಸದಂತೆ ತಡೆ ನೀಡಬೇಕು" ಎಂದು ಕೋರಿದರು.

ಅರ್ಜಿದಾರರ ವಾದ ಪರಿಗಣಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲೇ ನ್ಯಾಯಾಲಯ ಮಧ್ಯಂತರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಜ.9ರಂದು ಹೊರಡಿಸಿರುವ ಪ್ರಸ್ತಾವನೆಯನ್ನು ನ್ಯಾಯಾಲಯದ ಅನುಮತಿ ಇಲ್ಲದೆ ಅಂತಿಮಗೊಳಿಸಬಾರದು ಎಂದು ಮಧ್ಯಂತರ ಆದೇಶ ನೀಡಿತು. ಜತೆಗೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಒಂದು ವಾರ ಮುಂದೂಡಿತು.

ಪ್ರಕರಣದ ಹಿನ್ನೆಲೆ ಹೀಗಿದೆ..: 108 ಆಂಬ್ಯುಲೆನ್ಸ್​​ ಸೇವೆ ಕಲ್ಪಿಸುವ ಸಂಬಂಧ ತಮಗೆ ನೀಡಲಾಗಿದ್ದ ಟೆಂಡರ್ ರದ್ದುಪಡಿಸಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಲು ಸರ್ಕಾರ 2017ರಲ್ಲಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಜಿವಿಕೆ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ನ್ಯಾಯಾಲಯದ ಅನುಮತಿ ಪಡೆದ ನಂತರವಷ್ಟೇ ಗುತ್ತಿಗೆ ನೀಡಬೇಕು ಎಂದು 2017ರ ಆ.21ರಂದು ಮಧ್ಯಂತರ ಆದೇಶ ಮಾಡಿತ್ತು. ಆ ಅರ್ಜಿ ವಿಚಾರಣೆಗೆ ಬಾಕಿ ಇರುವಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು 108 ಆಂಬುಲೆನ್ಸ್​​ ಸೇವಾದಾರರ ಆಯ್ಕೆಗಾಗಿ 2023ರ ಜ.9ರಂದು ಪ್ರಸ್ತಾವನೆ ಹೊರಡಿಸಿದ್ದರು. ಇದನ್ನು ರದ್ದುಪಡಿಸುವಂತೆ ಕೋರಿ ಜಿವಿಕೆ ಸಂಸ್ಥೆ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.

ಜೀವನಾಂಶ ವಿಚಾರ: ತನ್ನ ಗಂಡನಿಗೆ ಆಸ್ತಿ ಇರುವ ಬಗ್ಗೆ ಕೌಟುಂಬಿಕ ನ್ಯಾಯಾಲಯದಲ್ಲಿ ಸಾಬೀತುಪಡಿಸಿದಲ್ಲಿ ಪತಿಯ ಕಾನೂನುಬದ್ಧ ಉತ್ತರಾಧಿಕಾರಿಗಳಿಂದ ಮಲತಾಯಿಯೂ ಜೀವನಾಂಶ ಪಡೆಯಬಹುದು ಎಂದು ಹೈಕೋರ್ಟ್​ ಆದೇಶಿಸಿದೆ. ಖಲೀಲ್​ ಉಲ್​ ರೆಹಮಾನ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನ್ಯಾ.ಕೆ.ನಟರಾಜನ್ ಅವರಿದ್ದ ಏಕ ಸದಸ್ಯಪೀಠವು ಈ ಆದೇಶವನ್ನು ನೀಡಿದೆ. ವಿಚಾರಣಾ ನ್ಯಾಯಾಲಯ ಮಲತಾಯಿಗೆ ಪ್ರತಿ ತಿಂಗಳು 25 ಸಾವಿರ ರೂಪಾಯಿಗಳ ಪರಿಹಾರ ನೀಡಬೇಕು ಎಂದು ನೀಡಿದ್ದ ಆದೇಶ ರದ್ದುಪಡಿಸಿದೆ.

ಇದನ್ನೂ ಓದಿ:ಅಪಘಾತದಲ್ಲಿ ಟೆಕ್ಕಿ ಸಾವು ಪ್ರಕರಣ : 3.66 ಕೋಟಿ ಪರಿಹಾರವನ್ನು 1.99 ಕೋಟಿಗೆ ಕಡಿತಗೊಳಿಸಿದ ಹೈಕೋರ್ಟ್

ABOUT THE AUTHOR

...view details