ಬೆಂಗಳೂರು :ನೀವೇನಾದರೂ ಕುಡಿದು ವಾಹನ ಚಲಾಯಿಸುತ್ತಿದ್ದೀರಾ? ಜೋಶ್ಗಾಗಿ ವ್ಹೀಲಿಂಗ್ ಮಾಡ್ತೀರಾ ? ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾಗಿದ್ದೀರಾ? ಹಾಗಾದರೆ ಮೇಲಿನ ಮೂರು ಅಂಶಗಳಲ್ಲಿ ಒಂದು ಏನಾದರೂ ಮಾಡಿದರೂ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್ ಆಗುತ್ತೆ ಎಚ್ಚರ.
ನಗರದಲ್ಲಿ ಕುಡಿದು ವಾಹನ ಚಲಾಯಿಸುತ್ತಿರುವ ಸವಾರರು ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ಇದರಿಂದ ಸಾವು - ನೋವುಗಳಿಗೆ ಕಾರಣರಾಗುತ್ತಿದ್ದಾರೆ. ಈ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಿ ದಂಡ ವಿಧಿಸಿದರೂ ಪ್ರಯೋಜನವಾಗುತ್ತಿಲ್ಲ. ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆ ಕಳೆದ ವರ್ಷ 2974 ವಾಹನ ಸವಾರರ ಪರವಾನಗಿ ರದ್ದು ಕೋರಿ ಆರ್ಟಿಓ ಕಚೇರಿಗೆ ಕಳುಹಿಸಲಾಗಿತ್ತು. ಈ ಪೈಕಿ 711 ಡಿಎಲ್ ಅಮಾನತು ಮಾಡಲಾಗಿದೆ. ಇನ್ನುಳಿದವರ ವಾಹನ ಪರವಾನಗಿ ರದ್ದುಗೊಳಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇನ್ನುಳಿದಂತೆ ಸಂಚಾರ ನಿಯಮ ಉಲ್ಲಂಘಿಸಿರುವ ಬೇರೆ ಬೇರೆ ರಾಜ್ಯದ ರಿಜಿಸ್ಟ್ರೇಶನ್ ಇರುವ ವಾಹನಗಳ ಬಗ್ಗೆ ಆಯಾ ರಾಜ್ಯಗಳಿಗೆ ಪತ್ರ ಬರೆದಿದ್ದೇವೆ. ಆ ವಾಹನ ಸವಾರರ ಡಿಎಲ್ ಸಹ ಸಸ್ಪೆಂಡ್ ಆಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ನಗರದಲ್ಲಿ ಡೇಂಜರ್ ಡ್ರೈವಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ವ್ಹೀಲಿಂಗ್ ಮಾಡಿದರೆ ವಾಹನದ ಆರ್ಸಿ ಕೂಡ ಸಸ್ಪೆಂಡ್ ಮಾಡ್ತೀವಿ ಎಂದು ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಎಚ್ಚರಿಕೆ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸಂಚಾರ ನಿಯಮ ಪಾಲನೆ ಮಾಡದಿರುವುದೇ ಇದಕ್ಕೆ ಮೂಲ ಕಾರಣವಾಗಿದೆ.