ಬೆಂಗಳೂರು: ಯಾವುದೇ ರಾಜಕೀಯ ಮುಖಂಡರ ವಿರುದ್ಧ, ಅವರ ಆರೋಗ್ಯ ಮತ್ತು ಇತರ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿಕರ ಹೇಳಿಕೆ ನೀಡದಂತೆ ನಾನು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಟ್ವೀಟ್ ಮೂಲಕ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಇತರರಿಗೆ ಕೆಟ್ಟದ್ದನ್ನು ಬಯಸುವುದು ನಮ್ಮ ಸಂಸ್ಕೃತಿಯಲ್ಲಿಲ್ಲ. ಕಾಂಗ್ರೆಸ್ ಎಂಬುದು ಸಹೋದರತ್ವ ಮತ್ತು ಮಾನವಿಯತೆಗೆ ಉದಾಹರಣೆಯಾಗಿದೆ ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದು, ಇವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕಾರ್ಯದರ್ಶಿ, ಕೆ.ಆರ್.ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆನಂದ್ ಪ್ರಸಾದ್ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆನಂದ್ ಅವರು ಅಮಿತ್ ಶಾ ವಿರುದ್ಧ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂಬ ಆಧಾರದ ಹಿನ್ನೆಲೆ ಅವರನ್ನು ಬಂಧಿಸಿರುವ ಕಾರಣ ಡಿಕೆಶಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153(ಎ) ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯ ಪಕ್ಷದ ಮುಖಂಡರು ಇಲ್ಲವೇ ಕಾರ್ಯಕರ್ತರಿಂದ ಆಗದಿರಲಿ ಎಂದು ಮನವಿ ಮಾಡಿದ್ದಾರೆ.