ಕರ್ನಾಟಕ

karnataka

ETV Bharat / state

ದೆಹಲಿಗೆ ಡಿಕೆಶಿ ದಿಢೀರ್ ಪ್ರಯಾಣ: ಹೈಕಮಾಂಡ್ ಜೊತೆ ಚರ್ಚೆ - D.K.Shivakumar sudden visit to Delhi news

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂದು ದೆಹಲಿಗೆ ದಿಢೀರ್​ ಪ್ರಯಾಣ ಬೆಳೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಬಿಜೆಪಿ ಸರ್ಕಾರದ ವಿರುದ್ಧ ಬೃಹತ್ ಹೋರಾಟದ ರೂಪುರೇಷೆ ಹೆಣೆಯುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಕೈಗೊಳ್ಳಬಹುದಾದ ತೀರ್ಮಾನ ಹಾಗೂ ಹೋರಾಟದ ಕುರಿತು ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮಗೊಳಿಸಲು ಡಿ.ಕೆ. ಶಿವಕುಮಾರ್​ ಅವರನ್ನ ಕರೆಸಿಕೊಳ್ಳಲಾಗಿದೆ.

ದೆಹಲಿಗೆ ಡಿಕೆಶಿ ದಿಢೀರ್ ಪ್ರಯಾಣ
ದೆಹಲಿಗೆ ಡಿಕೆಶಿ ದಿಢೀರ್ ಪ್ರಯಾಣ

By

Published : Sep 24, 2020, 11:10 PM IST

ಬೆಂಗಳೂರು: ಹೈಕಮಾಂಡ್ ಬುಲಾವ್ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ದಿಢೀರ್ ಅವರು ದಿಲ್ಲಿಗೆ ತೆರಳಿರುವುದು ಅಚ್ಚರಿಗೆ ಕಾರಣವಾಗಿದೆ. ಇಂದು ಬೆಳಗ್ಗೆ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಪಸ್ಥಿತರಿದ್ದರು. ಇಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಈ ಸಂಬಂಧ ವಿಧಾನಸಭೆಯಲ್ಲಿ ಪ್ರಸ್ತಾಪ ಮಂಡಿಸಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ಬಿಜೆಪಿ ಶಾಸಕಾಂಗ ಸಭೆ ಕರೆದು ಚರ್ಚಿಸಲಿದ್ದಾರೆ. ಈ ಒಂದು ಮಹತ್ವದ ಘಟ್ಟದಲ್ಲಿ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ಇರಬೇಕಾದ ಅನಿವಾರ್ಯತೆ ಇರುವ ಸಂದರ್ಭದಲ್ಲಿಯೂ ತರಾತುರಿಯಲ್ಲಿ ದೆಹಲಿಗೆ ತೆರಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ, ಮೊಮ್ಮಗ ಹಾಗೂ ಅಳಿಯ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿರುವ ಬಿಡಿಎ ಅಪಾರ್ಟ್​​​ಮೆಂಟ್​ ಹಗರಣವನ್ನು ಅತ್ಯಂತ ಗಂಭೀರವಾಗಿ ಕಾಂಗ್ರೆಸ್​ ಪರಿಗಣಿಸಿದೆ. ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ ಬೃಹತ್ ಹೋರಾಟದ ರೂಪುರೇಷೆ ಹೆಣೆಯುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಕೈಗೊಳ್ಳಬಹುದಾದ ತೀರ್ಮಾನ ಹಾಗೂ ಹೋರಾಟದ ಕುರಿತು ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಅಂತಿಮಗೊಳಿಸಲು ಡಿ.ಕೆ. ಶಿವಕುಮಾರ್​ ಅವರನ್ನ ಕರೆಸಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಹಾಗೂ ನಂತರದ ದಿನಗಳಲ್ಲಿ ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ಪ್ರತಿಭಟನೆ ಹಾಗೂ ಹೋರಾಟಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸುವ ಸಂಬಂಧ ಡಿಕೆಶಿ ಭೇಟಿ ಅತ್ಯಂತ ಮಹತ್ವ ಪಡೆದಿದೆ.

ಹೈಕಮಾಂಡ್ ಜೊತೆ ನಾಳೆ ಚರ್ಚೆ ನಡೆಸಲಿರುವ ಶಿವಕುಮಾರ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೈಗೊಳ್ಳಬಹುದಾದ ಹೋರಾಟಗಳ ಕುರಿತು ಸ್ಪಷ್ಟ ಚಿತ್ರಣ ಪಡೆದು ವಾಪಸ್​​ ಆಗಲಿದ್ದಾರೆ. ಇಲ್ಲಿ ಆಗಮಿಸಿದ ಬಳಿಕ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿ ರಾಜ್ಯಾದ್ಯಂತ ಜಿಲ್ಲಾಮಟ್ಟದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಕುರಿತು ತೀರ್ಮಾನ ಪ್ರಕಟಿಸಲಿದ್ದಾರೆ. ಮುಖ್ಯಮಂತ್ರಿಗಳ ಕುಟುಂಬ ಭಾಗಿಯಾಗಿದೆ ಎನ್ನಲಾಗಿರುವ ಹಗರಣವನ್ನು ಕಾಂಗ್ರೆಸ್ ಈಗ ದೊಡ್ಡ ಹೋರಾಟದ ಅಸ್ತ್ರವಾಗಿ ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ತಿರುವುಗಳನ್ನು ನೀಡುವ ಸಿದ್ಧತೆಯಲ್ಲಿದೆ. ಈ ನಿಟ್ಟಿನಲ್ಲಿ ಡಿಕೆಶಿ ಪ್ರವಾಸ ಸಾಕಷ್ಟು ಮಹತ್ವ ಪಡೆದಿದೆ.

ABOUT THE AUTHOR

...view details