ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಾಗೂ ಪಕ್ಷದ ಇತರ ಜವಾಬ್ದಾರಿಗಳನ್ನು ವಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಪಕ್ಷದ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಆರ್.ಧ್ರುವನಾರಾಯಣ್ ಹಾಗೂ ಸಲೀಂ ಅಹಮದ್ ಅವರಿಗೆ ವಿವಿಧ ಜಿಲ್ಲೆಗಳ ಜವಾಬ್ದಾರಿ ವಹಿಸುವ ಜೊತೆಗೆ ಕಾಂಗ್ರೆಸ್ ಪಕ್ಷದ ಕೆಲ ವಿಭಾಗಗಳ ಹೊಣೆಗಾರಿಕೆಯನ್ನೂ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ಮತ್ತು ಹೋರಾಟಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಕಾರ್ಯಾಧ್ಯಕ್ಷರು ಆಯಾ ಜಿಲ್ಲೆಯ ಮುಖಂಡರ ಜೊತೆ ಸಮಾಲೋಚಿಸಿ ತೀರ್ಮಾನ ಕೈಗೊಂಡು ಅಧ್ಯಕ್ಷರಿಗೆ ಮಾಹಿತಿ ಒದಗಿಸಲಿದ್ದಾರೆ. ಮುಂಬರುವ ದಿನಗಳಲ್ಲಿ ಎದುರಾಗುವ ಚುನಾವಣೆಗಳು ಹಾಗೂ ಹೋರಾಟಗಳ ರೂಪುರೇಷೆ ಹೆಣೆಯುವ ನಿಟ್ಟಿನಲ್ಲಿ ಕಾರ್ಯಾಧ್ಯಕ್ಷರಿಗೆ ಡಿಕೆಶಿ ಈ ಒಂದು ಹೊಸ ಗುರಿ ನೀಡಿದ್ದಾರೆ.
ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿಗೆ ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಣೆಗಾರಿಕೆ ವಹಿಸಲಾಗಿದೆ. ಇದರ ಜೊತೆಗೆ ಪಕ್ಷದ ಆಸ್ತಿ ಮತ್ತು ಸ್ವತ್ತುಗಳ ರಾಜ್ಯ ಸಮಿತಿ ಹಾಗೂ ಪಕ್ಷದ ಆಸ್ತಿ ಮತ್ತು ಸ್ವತ್ತುಗಳ ಬೆಂಗಳೂರು ನಗರ ಸಮಿತಿಯ ಜವಾಬ್ದಾರಿ ನೀಡಲಾಗಿದೆ.