ಬೆಂಗಳೂರು :ಮಾಜಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ವಿನಯ್ ಕುಲಕರ್ಣಿ ಅವರನ್ನು ಪೂರ್ಣ ಪ್ರಮಾಣದಲ್ಲಿ ಪಕ್ಷದ ಕೆಲಸಕ್ಕೆ ಬಳಸಿಕೊಳ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೇಂದ್ರ ಸಚಿವರಿಗೆ ಒಂದು ಕಾನೂನಾ? :ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಮೀರ್ ಹಾಗೂ ವಿನಯ್ ಕುಲಕರ್ಣಿ ಪರ ಬ್ಯಾಟ್ ಮಾಡಿದರು. ಇವರನ್ನ ಪಕ್ಷದ ಚಟುವಟಿಕೆಯಲ್ಲಿ ಬಳಸಿಕೊಳ್ಳುವ ವಿಚಾರದಲ್ಲಿ ಅನುಮಾನವೇ ಬೇಡ.
ವಿನಯ್ ಕುಲಕರ್ಣಿ ನಮ್ಮ ಹಿರಿಯ ನಾಯಕರು, ಮಂತ್ರಿ ಆಗಿದ್ದವರು. ಜಮೀರ್ ಹಾಗೂ ವಿನಯ್ ಕುಲಕರ್ಣಿ ಪರ ನಮ್ಮ ಪಕ್ಷ ಇದೆ. ಕುಲಕರ್ಣಿ ವಿರುದ್ಧ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಕೇಸ್ ಮಾಡಿದ್ದಾರೆ. ಬಹಳ ಸಂತೋಷ. ಆದರೆ, ಇವರ ಕೇಂದ್ರ ಮಂತ್ರಿಗಳು ಎಲ್ಲ ನಿಯಮ ಪಾಲನೆ ಮಾಡಿದ್ದಾರಾ? ಕೇಂದ್ರ ಸಚಿವರಿಗೆ ಒಂದು ಕಾನೂನಾ? ಎಂದು ಪ್ರಶ್ನಿಸಿದರು.
ಸಿ ಟಿ ರವಿ ಹೇಳಿಕೆಗೆ ಡಿಕೆಶಿ ತಿರುಗೇಟು :ಕಾಂಗ್ರೆಸ್ನವರು ಮಾನಸಿಕ ಅಸ್ವಸ್ಥರು ಎಂಬ ಸಿಟಿ ರವಿ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದರು. ಹೌದು, ಸಿ ಟಿ ರವಿಯಿಂದಾಗಿಯೇ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಈಗ ತಕ್ಷಣ ನಾನು ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತೇನೆ. ಸಿ ಟಿ ರವಿ ಸಲಹೆ ಮೇರೆಗೆ ಚಿಕಿತ್ಸೆ ಪಡಿತೇನೆ ಎಂದ್ರು.
ಒಂದು ಸಮುದಾಯ ಟಾರ್ಗೆಟ್ ಮಾಡಿ ಇಡಿ ದಾಳಿ ಎಂಬ ಆರೋಪ ವಿಚಾರ ಮಾತನಾಡಿದ ಅವರು, ಜಮೀರ್ ಅಹಮ್ಮದ್ ಈಗಾಗಲೇ ನನ್ನ ತಪ್ಪಿಲ್ಲ ಅಂತಾ ಹೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ಹೆಚ್ಚು ಕಮೆಂಟ್ ಮಾಡಲು ಹೋಗಲ್ಲ. ಆದರೆ, ಇಡೀ ದೇಶದಲ್ಲಿ ಎಲ್ಲ ಕಡೆಯೂ ಹೀಗೇ ಆಗ್ತಿದೆ. ಇದರ ವಿರುದ್ಧ ನಾವೂ ಕೂಡ ಹೋರಾಟ ಮಾಡ್ತಿದ್ದೇವೆ ಎಂದರು.
ಪಂಕ್ಚರ್ ಇವರು ಹಾಕ್ತಾರಾ?:ಅವನ್ಯಾರೋ ಎಂಪಿ ಬಹಳ ಬುದ್ಧಿವಂತ, ಅವನಷ್ಟು ನಾವು ಓದಿಲ್ಲ ಮಾಡಿಲ್ಲ. ಮುಸ್ಲಿಂ ಸಮಯದಾಯದವರನ್ನು ಪಂಕ್ಚರ್ ಹಾಕೋರು ಅಂದ. ಬೌರಿಂಗ್ ಹಾಸ್ಪಿಟಲ್ ಜಾತಿ ಧರ್ಮದ ಆಧಾರದ ಮೇಲಿದೆಯಾ? ಪಂಕ್ಚರ್ ಇವರು ಹಾಕ್ತಾರಾ? ರಾಜ್ಯದ ಎಲ್ಲ ಧರ್ಮದವರ ಸಾವಿನ ಹೆಣ ಹೊತ್ತವರು ಮುಸ್ಲಿಮರು.