ಬೆಂಗಳೂರು: ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಮತ್ತು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು.
ಆನೇಕಲ್ನಲ್ಲಿ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಉಚಿತವಾಗಿ ವಿತರಿಸುವ ರಾಜ್ಯ ಸರ್ಕಾರದ ಮುದ್ರೆಯ ಸಕ್ಕರೆ ಇತರೆ ಪದಾರ್ಥಗಳ ಪೊಟ್ಟಣ ಬದಲಿಸಿ, ಬಿಜೆಪಿ ಪಕ್ಷದ ಚಿನ್ನೆ ಇರುವ ಕವರ್ ಹಾಕಿ ಹಂಚಲು ತಯಾರಿ ನಡೆಸಿದ್ದನ್ನು ಖಂಡಿಸಿ ನಿನ್ನೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವ ಯತ್ನ ಮಾಡಲಾಗಿತ್ತು. ಬಿಜೆಪಿ ನಾಯಕರು ನಡೆಸುತ್ತಿರುವ ಅಕ್ರಮಗಳ ವಿರುದ್ಧ ಈಗಾಗಲೇ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಿತರ ನಾಯಕರು ಹೋರಾಟ ನಡೆಸುತ್ತಿದ್ದು, ಮಹಿಳಾ ಕಾಂಗ್ರೆಸ್ ಕೂಡ ಇದಕ್ಕೆ ನಿನ್ನೆ ಸಾಥ್ ನೀಡಿತ್ತು. ಸರ್ಕಾರ ಕಾಂಗ್ರೆಸ್ನ ಈ ಹೋರಾಟಕ್ಕೆ ಯಾವುದೇ ಬೆಲೆ ಕೊಡದ ಹಿನ್ನೆಲೆ ಹೋರಾಟವನ್ನು ಇನ್ನಾವ ರೀತಿಯಲ್ಲಿ ಮುಂದುವರಿಸಬಹುದು ಎಂಬ ಕುರಿತು ಚರ್ಚಿಸಲು ಶಿವಕುಮಾರ್ ವಿವಿಧ ನಾಯಕರ ಜೊತೆ ಸಭೆ ನಡೆಸುತ್ತಿದ್ದು, ಇದರ ಭಾಗವಾಗಿಯೇ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ನಿಯೋಗ ಇಂದು ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿತು.