ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ , ಕೋವಿಡ್ ಪರಿಸ್ಥಿತಿ ನಿರ್ವಹಣೆ ಸಂಬಂಧ ಪ್ರದೇಶ ಕಾಂಗ್ರೆಸ್ನ ನಾನಾ ಮುಂಚೂಣಿ ಘಟಕಗಳ ಮುಖ್ಯಸ್ಥರ ಜತೆ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಮಾಲೋಚನೆ ನಡೆಸಿದರು.
ಕೋವಿಡ್ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಆಗಿರುವ ವೈಫಲ್ಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ತಲುಪಿಸುವುದು, ಲಸಿಕೆ ನೀಡಿಕೆಗೆ ಕಾಂಗ್ರೆಸ್ಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸದಿರುವುದು, ಮುಂಬರುವ ದಿನಗಳಲ್ಲಿ ಜನರಿಗೆ ಮಾಹಿತಿ ನೀಡಿ ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟಕ್ಕೆ ಮುಂದಾಗಬೇಕು ಎನ್ನುವುದು, ಕೋವಿಡ್ ಆತಂಕದ ಮಧ್ಯೆ ಸಾಮಾಜಿಕ ಜಾಲತಾಣಗಳ ಮೂಲಕ ಮಾತ್ರ ಸರ್ಕಾರದ ವಿರುದ್ಧ ಹೋರಾಡಲು ಸಾಧ್ಯ ಎಂಬುದನ್ನು ಜನರಿಗೆ ಮಾಡಿಕೊಡುವ ಕಾರ್ಯವನ್ನು ಮಾಡಬೇಕು. ಈ ಸಂದರ್ಭ ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಂಡು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವ ಕುರಿತು ಚರ್ಚೆ ನಡೆದಿದೆ.
ಕೋವಿಡ್ ನಿಂದಾಗಿ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಸಂಕಷ್ಟಕ್ಕೊಳಗಾದವರ ನೆರವಿಗೆ ನಿಲ್ಲುವಂತೆ ಸೂಚನೆ ನೀಡಲಾಯಿತು. ಸ್ಥಳೀಯ ಮಟ್ಟದಲ್ಲಿ ನೆರವಿಗೆ ನಿಲ್ಲುವಂತೆ ಸೂಚನೆ ಕೊಡಲಾಯಿತು. ಕಾಂಗ್ರೆಸ್ ಪಕ್ಷದ ಸಹ ಆರೋಗ್ಯ ಘಟಕದ ಮೂಲಕ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಅಲ್ಲದೆ ಸಾಕಷ್ಟು ಆ್ಯಂಬುಲೆನ್ಸ್ಗಳು ಹಾಗೂ ಪಕ್ಷದ ಮುಖಂಡರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬಡವರಿಗೆ ಸಹಾಯ ಸಹಕಾರ ನೀಡುವ ಕಾರ್ಯ ಮಾಡುತ್ತಿದ್ದಾರೆ. ಇಂಥವರನ್ನು ಉತ್ತೇಜಿಸುವ ಹಾಗೂ ಅವರ ಶ್ರಮಕ್ಕೆ ಬೆಲೆ ದೊರಕುವಂತೆ ಮಾಡುವ ಕಾರ್ಯವನ್ನು ಮುಂಚೂಣಿ ಘಟಕಗಳು ಮಾಡಬೇಕು. ಒಟ್ಟಾರೆ ಕಾಂಗ್ರೆಸ್ ಪಕ್ಷ ಒಂದು ಶಕ್ತಿಯಾಗಿ ಜನರ ಪರ ನಿಲ್ಲಬೇಕು ಎಂದು ಡಿ ಕೆ ಶಿವಕುಮಾರ್ ಇದೇ ಸಂದರ್ಭ ಕರೆಕೊಟ್ಟರು.
ಸಭೆಯಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಮಾಧ್ಯಮ ಘಟಕದ ಅಧ್ಯಕ್ಷ ಬಿ.ಎಲ್. ಶಂಕರ್, ಸಹ ಅಧ್ಯಕ್ಷ ವಿ.ಆರ್. ಸುದರ್ಶನ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.