ಬೆಂಗಳೂರು : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮ ದಿನದ ಅಂಗವಾಗಿ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ಏಕತಾ ಸೈಕಲ್ ಜಾಥಾಕ್ಕೆ ನಗರದ ಶೇಷಾದ್ರಿಪುರದ ರಾಜೀವ್ ಗಾಂಧಿ ಪ್ರತಿಮೆ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಚಾಲನೆ ನೀಡಿದರು.
ಆಗಸ್ಟ್ 20 ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮ ದಿನವಾಗಿದೆ. ಅದರ ಅಂಗವಾಗಿ ಕೆಪಿಸಿಸಿ ವಕ್ತಾರೆ ಕವಿತಾ ರೆಡ್ಡಿ ನೇತೃತ್ವದಲ್ಲಿ ಇಂದು ಬೆಂಗಳೂರಿನಿಂದ ಹೊರಟಿರುವ ಏಕತಾ ಸೈಕಲ್ ಜಾಥಾವು, 300 ಕಿ.ಮೀ. ಕ್ರಮಿಸಿ ರಾಜೀವ್ ಗಾಂಧಿ ಹುತಾತ್ಮರಾದ ಸ್ಥಳ ತಮಿಳುನಾಡಿನ ಶ್ರೀಪೆರಂಬದೂರನ್ನು ಆಗಸ್ಟ್ 20 ರಂದು ತಲುಪಲಿದೆ.
ಸೈಕಲ್ ಜಾಥಾಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು ಇಂದಿನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅನಿಲ್ ಲಾಡ್, ಕೆಪಿಸಿಸಿ ವಕ್ತಾರೆ ಕವಿತಾ ರೆಡ್ಡಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲಾವಣ್ಯ ಮತ್ತಿತರರು ಇದ್ದರು.
ಓದಿ : ಯಡಿಯೂರಪ್ಪನವರ ಕನಸು ನನಸು ಮಾಡುತ್ತೇವೆ: ಬಿ.ವೈ ವಿಜಯೇಂದ್ರ
ಸಾಮಾನ್ಯವಾಗಿ ಪ್ರತಿ ವರ್ಷ ರಾಜೀವ್ ಗಾಂಧಿ ಹತ್ಯೆಗೀಡಾದ ದಿನ, ಅಂದರೆ ಮೇ 21 ರಂದು ಕಾಂಗ್ರೆಸ್ ಕಾರ್ಯಕರ್ತರು ರಾಜೀವ್ ಜ್ಯೋತಿ ಯಾತ್ರೆ ಮೂಲಕ ಶ್ರೀಪೆರುಂಬುದೂರನ್ನು ತಲುಪಿ, ಅಲ್ಲಿ ಅವರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯುತ್ತಿತ್ತು. ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಾಹನಗಳ ಮೂಲಕ ಶ್ರೀಪೆರಂಬದೂರಿನ ರಾಜೀವ್ ಗಾಂಧಿ ಹತ್ಯೆಯಾದ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿ ಬರುತ್ತಿದ್ದರು. ಆದರೆ, ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ತೆರಳಲು ಸಾಧ್ಯವಾಗಲಿಲ್ಲ. ಕೆಲವು ಮಂದಿ ಮಾತ್ರ ತೆರಳಿ ನಮನ ಸಲ್ಲಿಸಿ ಬಂದಿದ್ದಾರೆ. ಈ ವರ್ಷ ರಾಜೀವ್ ಗಾಂಧಿಯವರ ಹುಟ್ಟುಹಬ್ಬದ ಸಂದರ್ಭ, ಅಂದರೆ ಆಗಸ್ಟ್ 20ರಂದು ಶ್ರೀಪೆರಂಬದೂರು ತಲುಪಲು ಕೆಲ ಯುವ ಕಾರ್ಯಕರ್ತರು ತೀರ್ಮಾನಿಸಿದ್ದಾರೆ.
ಕೆಪಿಸಿಸಿ ವಕ್ತಾರೆ ಕವಿತಾ ರೆಡ್ಡಿ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ಮೂಲಕ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದಾರೆ. ಏಕತಾ ಸೈಕಲ್ ಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರು ರಾಜೀವ್ ಗಾಂಧಿಯವರ ಕೊಡುಗೆಯನ್ನು ಸ್ಮರಿಸುವ ಉದ್ದೇಶ ಹೊಂದಿದ್ದಾರೆ.