ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ರಾಜ್ಯಸಭೆ ಮಾಜಿ ಸದಸ್ಯ ಎಂ. ರಾಜಗೋಪಾಲ್ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಮೂಲತಃ ನನ್ನ ಜಿಲ್ಲೆಯವರೇ ಆದ ದೊಡ್ಡಬಳ್ಳಾಪುರದ ರಾಜಗೋಪಾಲ್ ಅವರು ನನಗೆ ಬಹಳ ಆತ್ಮೀಯರು ಹಾಗೂ ಮಾರ್ಗದರ್ಶಿಗಳಾಗಿದ್ದರು. ಅನೇಕ ಸಂದರ್ಭಗಳಲ್ಲಿ ಅವರ ಸಲಹೆ, ಸೂಚನೆಗಳನ್ನು ಪಡೆದಿದ್ದೇನೆ. ಒಂದು ರೀತಿಯಲ್ಲಿ ಅವರು ನನಗೆ ಗುರುಗಳೇ ಆಗಿದ್ದರು. ಅವರ ಅಗಲಿಕೆ ನನ್ನ ಮನಸ್ಸಿಗೆ ಬಹಳ ನೋವು ತಂದಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ರಾಜಕೀಯದ ಜೀವನದ ಆರಂಭದಲ್ಲಿ ಬೆಂಗಳೂರಿಗೆ ಬಂದಾಗ ನನ್ನ ಬಳಿ ಫೋನ್ ಕೂಡ ಇರಲಿಲ್ಲ. ಆಗ ರಾಜಗೋಪಾಲ್ ಅವರು ತಮ್ಮ ಕೋಟಾದಲ್ಲಿ ನನ್ನ ಮನೆಗೆ ಫೋನ್ ಕೊಡಿಸಿದ್ದರು. ಯುವ ನಾಯಕನಾಗಿದ್ದ ಸಂದರ್ಭದಲ್ಲಿ ಅವರು ನನಗೆ ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ. ಯುವ ನಾಯಕರನ್ನು ಪ್ರೋತ್ಸಾಹಿಸಿ, ಬೆಳೆಸುವಲ್ಲಿ ಅವರು ಸದಾ ಉತ್ಸುಕರಾಗಿದ್ದರು. ಯಾವಾಗಲೂ ಯುವಕರ ಏಳಿಗೆ ಬಯಸುತ್ತಿದ್ದರು.