ಬೆಂಗಳೂರು :ರಾಜರಾಜೇಶ್ವರಿ ನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಅಧಿಕಾರದ ದುರುಪಯೋಗ ಆಗುತ್ತಿದೆ. ಇದಕ್ಕೆ ಕಡಿವಾಣ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದೂರಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮನವಿಗೆ ಚುನಾವಣಾ ಆಯೋಗ ಸ್ಪಂದಿಸಿದೆ. ಇದಕ್ಕೆ ಧನ್ಯವಾದಗಳು. ಕ್ಷೇತ್ರದ ಅಭ್ಯರ್ಥಿ ಮುನಿರತ್ನ ಆಪ್ತರ ಬಳಿ ಮಾತನಾಡುವಾಗ 34 ಸಾವಿರ ಸೆಟ್ ಅಪ್ ಬಾಕ್ಸ್ ನೀಡಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗಂಭೀರ ತನಿಖೆ ನಡೆಸುತ್ತಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ಸಾವಿರ ರೂ. ಬೆಲೆಯ ಬಾಕ್ಸ್ ನೀಡಿದ್ದು, 3.4 ಕೋಟಿ ರೂ. ವ್ಯಯಿಸಿದ್ದಾರೆ. 150 ರೂ. ಮಾಸಿಕ ಬಾಡಿಗೆ ಮನ್ನಾ ಮಾಡಿದ್ದು, 50 ಲಕ್ಷ ರೂ. ಮೊತ್ತ ಆಗಲಿದೆ. ನಿತ್ಯದ ಲೆಕ್ಕಾಚಾರ ಹಾಕುತ್ತಿರುವ ಚುನಾವಣಾ ಆಯೋಗ, ಇದರ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಕಲಂ 173 ಹಾಗೂ 171ರ ಅಡಿ ಕಾನೂನು ಪ್ರಕಾರ ಇದು ಅಪರಾಧ. ಇದರಿಂದ ಅಭ್ಯರ್ಥಿ ಸ್ಪರ್ಧೆಯನ್ನು ಇಂದು ರಾತ್ರಿಯೇ ಅನರ್ಹಗೊಳಿಸಬೇಕೆಂದು ಆಗ್ರಹಿಸಿದರು.
ಕೂಡಲೇ ಈ ಸಂಬಂಧ ತನಿಖೆ ಆಗಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ವಿರುದ್ಧ ದೂರು ನೀಡಿದಂತೆ ಇವರ ಮೇಲೆ ಏಕೆ ನೀಡಿಲ್ಲ. ನಮಗೆ ಅಚ್ಚರಿ ಮೂಡಿಸುವ ಅಂಶವೆಂದರೆ 42 ಸಾವಿರ ಮತಗಳು ಮನೆಯೇ ಇಲ್ಲದೆ ಖಾಲಿ ನಿವೇಶನ ಇರುವಲ್ಲಿ ಮತದಾರರ ಪಟ್ಟಿಗೆ ಸೇರಿಸಿದ್ದಾರೆ. ಇಬ್ಬರು ಮೂರು ಮಂದಿ ಮನೆಯಲ್ಲಿದ್ದರೆ 5-7 ಮತದಾರರು ಅಂತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದರು.
ನಮ್ಮ ಕಾರ್ಯಕರ್ತರು ಸರ್ವೆ ಮಾಡಿದ್ದಾರೆ. ನನ್ನ ಬಳಿಯೂ ದಾಖಲೆ ಇದೆ. ಕೊಟ್ಟಿಗೆಪಾಳ್ಯದ ಭಾಗ 293, ನಾಗರಬಾವಿ ಎರಡನೇ ಹಂತ, ರಾಜರಾಜೇಶ್ವರಿ ವಾರ್ಡ್ 160ರ ನಂ.130ರಿಂದ 239ರವರೆಗಿನ 56 ಮತಗಳು ಒಂದೇ ವಿಳಾಸದಲ್ಲಿವೆ. ಇನ್ನೊಂದೆಡೆ ಒಂದೇ ಮನೆಯಲ್ಲಿ 15 ಮತ, ಮತ್ತೊಂದೆಡೆ 10 ಮತಗಳಿವೆ ಎಂದು ಹೇಳಲಾಗಿದೆ.
ಆದರೆ, ಅಷ್ಟು ಸಂಖ್ಯೆಯ ಜನ ಅಲ್ಲಿಲ್ಲ. ನ್ಯೂ ಹೊರೈಜನ್ ಶಾಲೆಯ ಬೂತ್ ನಂ. 162ರ ಎರಡನೇ ಸಂಖ್ಯೆಯ ಮನೆಯಲ್ಲಿ 10 ಮತ ಇದೆ ಎಂದು ನಕಲಿ ಗುರುತಿನ ಚೀಟಿ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿದರು. ಬಾಲ್ಡ್‌ವಿನ್ ಕಿರಿಯ ಪ್ರಾಥಮಿಕ ಶಾಲೆಯ ವ್ಯಾಪ್ತಿಯಲ್ಲಿ 9 ಮತ ಸೇರಿಸಲಾಗಿದೆ. ಬೆಮೆಲ್ ಬಡಾವಣೆಯ ಖಾಲಿ ನಿವೇಶನದಲ್ಲಿ ಜನ ಇದ್ದಾರೆಂದು ಗುರುತಿನ ಚೀಟಿ ಸಿದ್ಧಪಡಿಸಲಾಗಿ. ನಾನು ರಿಟರ್ನಿಂಗ್ ಅಧಿಕಾರಿ ಹಾಗೂ ಜನರಲ್ಲಿ ಮನವಿ ಮಾಡುತ್ತೇನೆ.
ಮತದಾನಕ್ಕೆ ತೆರಳಿದ ಸಂದರ್ಭ ಚೆಕ್ ಮಾಡಿ, ನಮ್ಮ ಮನೆಯಲ್ಲಿ ಇಷ್ಟು ಜನ ಇಲ್ಲ ಎಂದು ತಿಳಿಸಿ. ಚುನಾವಣಾ ಆಯೋಗಕ್ಕೂ ಮನವಿ ಮಾಡುತ್ತೇನೆ. ನಕಲಿ ಮತದಾರರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸುತ್ತೇನೆ ಎಂದರು. ಮಾಸ್ಕ್ ಒಳಗೆ 1000 ರೂ. ನಗದು ನೀಡುವುದು. ನೇರವಾಗಿ ಹಣ ಹಂಚುವ ನೂರಾರು ವಿಡಿಯೋ ನಮ್ಮ ಬಳಿ ಇದೆ.
ಮತದಾರರ ಗುರುತಿನ ಚೀಟಿ ಇಲ್ಲದವರಿಗೂ ಸೂಕ್ತ ದಾಖಲೆ ಒದಗಿಸಿದರೆ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು. ಗೊರಗುಂಟೆಪಾಳ್ಯ ಒಂದರಲ್ಲೇ 3,500 ಮನೆ ಖಾಲಿ ಆಗಿವೆ. ಇಲ್ಲೆಲ್ಲಾ ನಕಲಿ ಮತದಾರರ ಸೃಷ್ಟಿ ಆಗಿದೆ. ಶೇ. 10ರಷ್ಟು ಅಕ್ರಮ ಮತದಾರರನ್ನು ಈ ರೀತಿ ಸೃಷ್ಟಿಸಲಾಗಿದೆ. ಕೂಡಲೇ ಅಭ್ಯರ್ಥಿಯ ಸ್ಪರ್ಧೆಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.