ಬೆಂಗಳೂರು: ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಇಲ್ಲೊಬ್ಬ ತಿಹಾರ್ ಜೈಲಿನಿಂದ ಮರಳಿ ಬಂದ ಮಹನೀಯರೊಬ್ಬರು, ಯಾವುದೋ ಹುದ್ದೆಯ ಆಸೆಯೊಂದಿಗೆ, ಅವರ ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು, ಅತಿ ದೊಡ್ಡ ಯೇಸುವಿನ ಪ್ರತಿಮೆ ಸ್ಥಾಪಿಸಿ ತಮ್ಮ ಪೌರುಷವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ ಎಂಬ ಅನಂತ್ ಕುಮಾರ್ ಹೆಗಡೆ ಟ್ವೀಟ್ ಮಾಡಿದ್ದರು.
ಇದಕ್ಕೆ ತಿರುಗೇಟು ನೀಡಿದ ಡಿಕೆಶಿ, ಡಾ. ಅಂಬೇಡ್ಕರ್ ಸಾಹೇಬರ ಸಂವಿಧಾನ ಸುಡಲು ಮುಂದಾದ ಅಲ್ಪರಿಂದ ಪಾಠ ಹೇಳಿಸಿಕೊಳ್ಳುವ ಜರೂರತ್ತು ನನಗಿಲ್ಲ ಎಂದು ಕಿಡಿ ಕಾರಿದ್ದಾರೆ.
ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಭದ್ರಬುನಾದಿಯಾದ ಸಮಾನತೆ ಮತ್ತು ಸರ್ವಧರ್ಮ ಸಹಿಷ್ಣುತೆಯಲ್ಲಿ ನಂಬಿಕೆ ಇಟ್ಟಿರುವವನು ನಾನು. ನನ್ನ ಕನಕಪುರ ಕ್ಷೇತ್ರದಲ್ಲಿ ಎಲ್ಲ ಜಾತಿ ಧರ್ಮದ ಜನರೂ ಇದ್ದಾರೆ. ಅವರ ಭಾವನೆ ಗೌರವಿಸುವುದು ನನ್ನ ಧರ್ಮ ಎಂದು ಟ್ವೀಟ್ ಮೂಲಕ ವಿವರಿಸಿದ್ದಾರೆ.
ಯೇಸು ಪ್ರತಿಮೆಗೆ ಜಾಗ ಕೊಟ್ಟಿರುವುದು ಮಾತ್ರವಲ್ಲ, ನಾನು ಸಚಿವನಾಗಿದ್ದಾಗ ಕೆಂಪೇಗೌಡ ಪ್ರಾಧಿಕಾರ ರಚನೆಯಾಗಿದೆ. ಕೆಂಪೇಗೌಡ ಜಯಂತಿ ನಿಮಿತ್ತ ಸರ್ಕಾರಿ ರಜೆ ಘೋಷಣೆ ಮಾಡಿಸಿದ್ದೇನೆ. ದಿವಂಗತ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರು ರಾಮನಗರ ಬಿಡದಿಯ ಬಾಣಂದೂರು ಹಾಗೂ ಶಿವೈಕ್ಯ ಶಿವಕುಮಾರ್ ಸ್ವಾಮಿಗಳ ಹುಟ್ಟೂರು ರಾಮನಗರದ ಮಾಗಡಿ ಗ್ರಾಮದ ಅಭಿವೃದ್ಧಿಗೆ ತಲಾ 25 ಕೋಟಿ ರೂಪಾಯಿ ನೀಡಿದ್ದೇನೆ. ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಎಂದರು.