ಬೆಂಗಳೂರು: ಶ್ರಮಿಕರಿಗೆ ಆರ್ಥಿಕ ಸಹಕಾರ ನೀಡುವಂತೆ ಸಂಸದ ಡಿ.ಕೆ. ಸುರೇಶ್ ಅವರು ಪ್ರಧಾನಿ ಮೋದಿ, ಸಿಎಂ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರಾಜ್ಯ ಸಚಿವ ಈಶ್ವರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸೋಂಕು ತಗುಲಿದ್ದು, ಅವರಿಗೆ 50 ದಿನಗಳ ವೇತನವನ್ನು ನೀಡಬೇಕು. ಕಾರ್ಮಿಕರು ಸೋಂಕಿನಿಂದ ಮೃತಪಟ್ಟರೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ರಾಜ್ಯ ಹಾಗೂ ದೇಶದಲ್ಲಿ ಸಾವಿರಾರು ನರೇಗಾ ಕಾರ್ಡ್ ಹೊಂದಿರುವ ಕಾರ್ಮಿಕರು ಕೊರೊನಾ ಸೋಂಕಿತರಾಗಿದ್ದಾರೆ. ಇವರು ದಿನಗೂಲಿ ನೆಚ್ಚಿಕೊಂಡು ಬದುಕುತ್ತಿದ್ದು, ಸರ್ಕಾರ ಇವರ ನೆರವಿಗೆ ಧಾವಿಸಬೇಕು ಎಂದಿದ್ದಾರೆ.
ಈ ಸೋಂಕಿತರು ಗುಣಮುಖರಾದರೂ ಮುಂದಿನ 3 ತಿಂಗಳು ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ 50 ದಿನಗಳ ವೇತನ ಭತ್ಯೆಯನ್ನು ನೇರವಾಗಿ ಅವರ ಖಾತೆಗೆ ಹಾಕಬೇಕು. ಮಹಾಮಾರಿ ಸೋಂಕಿಗೆ ರಾಜ್ಯ ಹಾಗೂ ದೇಶದಲ್ಲಿ ಸಾವಿರಾರು ಕಾರ್ಮಿಕರು ಮೃತಪಟ್ಟಿದ್ದಾರೆ. ಹೀಗಾಗಿ ನರೇಗಾ ಯೋಜನೆಯ, 2ನೇ ಶೆಡ್ಯೂಲ್ನ 27 ನೇ ಪ್ಯಾರಾದಲ್ಲಿ ತಿಳಿಸಿರುವಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಮೈಸೂರು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ
ಆಮ್ ಆದ್ಮಿ ಬಿಮಾ ಯೋಜನೆಯ ಪ್ರಕಾರ, ಕಾರ್ಮಿಕನೊಬ್ಬ ಸಹಜವಾಗಿ ಸಾವನ್ನಪ್ಪಿದರೆ 30 ಸಾವಿರ ರೂ., ಅಸಹಜ ಸಾವಿಗೀಡಾದರೆ 75 ಸಾವಿರ ರೂ. ಪರಿಹಾರ ನೀಡಬೇಕಿದೆ. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಪ್ರಕಾರ, ಕಾರ್ಮಿಕ ಅಸಹಜವಾಗಿ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಯೋಜನೆ ಕೇವಲ 2019-20 ನೇ ಸಾಲಿಗೆ ಸೀಮಿತವಾಗಿದ್ದು, ಇದನ್ನು 2020-21ನೇ ಸಾಲಿಗೂ ಆದಷ್ಟು ಬೇಗ ವಿಸ್ತರಿಸಬೇಕು. ಮಾನವೀಯತೆ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಈ ವಿಚಾರಗಳ ಬಗ್ಗೆ ಗಮನ ಹರಿಸಿ ಜಾರಿಗೆ ತರಲಿ ಎಂದಿದ್ದಾರೆ.