ಬೆಂಗಳೂರು :ಯಾವ ಕ್ಷಣದಲ್ಲಿ ಬೇಕಾದರೂ ನಿಗಮ, ಮಂಡಳಿ ಆಯ್ಕೆ ಪಟ್ಟಿ ಪ್ರಕಟವಾಗಬಹುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಕ್ರಾಂತಿ ಉಡುಗೊರೆಯಾಗಿ ನಿಗಮ ಮಂಡಳಿ ನೇಮಕ ಆಗುತ್ತದೆಯೇ ಎಂಬ ಪ್ರಶ್ನೆಗೆ. ಈ ಪಟ್ಟಿ ಮುಂದೂಡುವ ಸಾಧ್ಯತೆ ಇಲ್ಲ. ಚುನಾವಣೆ ಸಮಯದಲ್ಲಿ ನಾವು ಯಾರಿಗೆ ಮಾತು ಕೊಟ್ಟಿದ್ದೆವೋ ಅವರಿಗೆ ಸ್ಥಾನಮಾನ ನೀಡಲಾಗುತ್ತದೆ ಎಂದರು.
ಜ.19 ಲೋಕಸಭೆ ಚುನಾವಣಾ ಸಮಿತಿ ಸಭೆ :ಇದೇ ಜನವರಿ 19 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಇಂದಿರಾ ಭವನದಲ್ಲಿ ಪಕ್ಷದ ಲೋಕಸಭೆ ಚುನಾವಣೆ ಸಮಿತಿ ಸಭೆ ಕರೆಯಲಾಗಿದೆ. ಜ. 21 ರಂದು ಮಂಗಳೂರಲ್ಲಿ ರಾಜ್ಯಮಟ್ಟದ ಕಾರ್ಯಕರ್ತರ ಸಭೆ ನಡೆಯಲಿದೆ. ಜ.19 ರಂದು ನಡೆಯುವ ಸಭೆಗೆ ದೆಹಲಿಯಿಂದ ವೀಕ್ಷಕರು ಕೂಡ ಆಗಮಿಸಲಿದ್ದು, ಜಿಲ್ಲಾ ಸಚಿವರು ಅಭ್ಯರ್ಥಿ ಆಯ್ಕೆ ವಿಚಾರವಾಗಿ ನೀಡಿರುವ ವರದಿ ಬಗ್ಗೆ ಚರ್ಚೆ ಮಾಡಲಾಗುವುದು. ಆದಷ್ಟು ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ ಹಾಗೂ 21 ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷರು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.