ಬೆಂಗಳೂರು: ಮತದಾರರ ಗುರುತಿನ ಚೀಟಿ ಅಕ್ರಮ ಮುಂದುವರಿಸಿರುವ ಬಿಜೆಪಿ ಸರ್ಕಾರ, ಮತದಾರರ ಹೆಸರನ್ನು ಎರಡು ಮೂರು ಕಡೆ ಬೇರೆ ಬೇರೆ ಚಿತ್ರ, ವಿಳಾಸ, ವಯಸ್ಸು ಬದಲಿಸಿ ಮತದಾರರ ಪಟ್ಟಿಗೆ ಸೇರಿಸುವ ದೊಡ್ಡ ಅಕ್ರಮ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನ ಕ್ವೀನ್ ಸಂಸ್ಥೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿನ್ನ ಕದಿಯುವವರನ್ನ ನೋಡಿದ್ದೇವೆ. ಹಸು, ಕುರಿ ಕದಿಯುವವರನ್ನ ನೋಡಿದ್ದೇವೆ. ಆದರೆ ವೋಟು ಕದಿಯುವವರನ್ನ ನೋಡಿಲ್ಲ. ಇವತ್ತು ವ್ಯವಸ್ಥಿತವಾದ ಸಂಚು ನಡೆಯುತ್ತಿದೆ. ಡಬಲ್ ಡಬಲ್ ವೋಟ್ ಮಾಡಲು ಸಂಚು ನಡೆದಿದೆ. ಎಲೆಕ್ಷನ್ ಅಧಿಕಾರಿಗಳ ಕಣ್ಣು ಮುಚ್ಚಿಸಿದ್ದಾರೆ. ಒಂದೊಂದು ಮತವನ್ನು ಮೂರ್ಮೂರು ಮಾಡಿದ್ದಾರೆ. ಸಾಕ್ಷಿ ಸಮೇತ ನಾವು ಅದನ್ನ ಬಿಚ್ಚಿಡುತ್ತೇವೆ. ಮಹದೇವಪುರದ ವೋಟರ್ ಲೀಸ್ಟ್ ನಮ್ಮ ಬಳಿ ಇದೆ ಎಂದರು.
40 ಸಾವಿರ ವೋಟರ್ಸ್ ಕ್ರಿಯೇಟ್ ಮಾಡಿದ್ದಾರೆ -ಡಿಕೆಶಿ:ಒಂದು ಹೆಸರು ಮೂರು ಕಡೆ ಒಂದೇ ಇದೆ. ಆದರೆ ಫೋಟೋ ಮಾತ್ರ ಚೇಂಜ್ ಆಗಿದೆ. ಅರ್ಧದಷ್ಟು ಫೇಕ್ ವೋಟರ್ಸ್ ಕ್ರಿಯೇಟ್ ಮಾಡಿದ್ದಾರೆ. ಒಂದೇ ಫೋಟೋ, ಮೂರು ಕಡೆ ಅಡ್ರೆಸ್ ಇದ್ದು, 40ಸಾವಿರ ವೋಟರ್ಸ್ ಕ್ರಿಯೇಟ್ ಮಾಡಿದ್ದಾರೆ. ಫಾರಂ 7 ಇಲ್ಲ, ಫಾರಂ 8 ಕೂಡ ಇಲ್ಲ. ಬಿಎಲ್ಒ ಗಳು ಇದಕ್ಕೆ ಸಹಿ ಹಾಕಿದ್ದಾರೆ. ಮಹದೇವಪುರದಲ್ಲಿ 6 ಲಕ್ಷ ಮತದಾರರಿದ್ದಾರೆ ಎಂಬ ಮಾಹಿತಿ ನೀಡಿದರು.
ಅರ್ಪಿತ ದಾಸ್ ಒಂದೇ ಹೆಸರು ಎರಡು ಕಡೆ ಇದೆ. ಒಂದೇ ಫೋಟೋ ಎರಡು ನಂಬರ್ ಎರಡು ಕಡೆ. ಅಶೋಕ್ ಅಭಿರಾಂ ಎರಡು ಕಡೆ ಮತ. ಅಜಯ್ ದಾಸ್ ಗುಪ್ತ ಎರಡು ಕಡೆ ಎಪಿಕ್ ನಂಬರ್ ಇದೆ. ಫೋಟೋಗಳು ಮಾತ್ರ ಚೇಂಜ್ ಆಗಿದೆ. ಮತದಾನದ ನಂಬರ್ ಮಾತ್ರ ಬೇರೆ ಬೇರೆ ಆಗಿವೆ. ಇದನ್ನ ಸಾಕ್ಷಿ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡ್ತೇವೆ. ಕೂಡಲೇ ಯಾರು ಎಆರ್ಒ, ಬಿಎಲ್ಒ ಇದ್ದಾರೆ ಸಸ್ಪೆಂಡ್ ಮಾಡಬೇಕು. ಮಹದೇವಪುರದ ಚುನಾವಣಾಧಿಕಾರಿಗಳನ್ನ ಸಸ್ಪೆಂಡ್ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಆಗ್ರಹಿಸಿದರು.