ಬೆಂಗಳೂರು: ಇಂದು ಅನ್ನಭಾಗ್ಯ ಭರವಸೆ ಜಾರಿ ಮೂಲಕ ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಸಂದೇಶ ರವಾನೆಯಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಅನ್ನಭಾಗ್ಯ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ದಿನವೇ ಬಸವ ಜಯಂತಿಯಂದು ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದನ್ನು ಈ ದಿನ ಸ್ಮರಿಸುತ್ತೇನೆ ಎಂದರು.
ಬಳಿಕ ನಮ್ಮ ಸರ್ಕಾರ ಆ ಯೋಜನೆಯಲ್ಲಿ ಅಕ್ಕಿಯ ಪ್ರಮಾಣವನ್ನು 7 ಕೆಜಿಗೆ ಹೆಚ್ಚಳ ಮಾಡಿತ್ತು. ನಂತರದ ಸರ್ಕಾರ ಅದನ್ನು 5 ಕೆಜಿಗೆ ಇಳಿಸಿತ್ತು. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುವುದಾಗಿ, ಐದು ಗ್ಯಾರಂಟಿ ಯೋಜನೆಗಳಲ್ಲಿ ಸೇರಿಸಿದ್ದೆವು. ನಮ್ಮ ಈ ಯೋಜನೆಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅದರ ಜೊತೆಗೆ ರಾಜಕೀಯ ಕೂಡ ನಡೆಯುತ್ತಿದೆ. ಈ ಯೋಜನೆಗೆ ಅಗತ್ಯವಿರುವ ಅಕ್ಕಿಯನ್ನು ನೀಡಿ ಕೇಂದ್ರ ಸರ್ಕಾರ ತನ್ನ ಹೃದಯ ಶ್ರೀಮಂತಿಕೆ ಮೆರೆಯಬಹುದಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸ್ನೇಹಿತರಿಗೆ ಒಂದು ಮಾತು ಹೇಳ ಬಯಸುತ್ತೇನೆ. ಆಹಾರ ಭದ್ರತೆ ಕಾಯ್ದೆ ತಂದವರು ಯಾರು?. ಏಕೆ ತಂದರು ಎಂದು ಅರಿಯಬೇಕು. ದೇಶವನ್ನು ಹಸಿವುಮುಕ್ತ ಮಾಡುವ ಉದ್ದೇಶದಿಂದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿ ಬಡ ಜನರಿಗೆ ಆಹಾರ ಧಾನ್ಯ ನೀಡುವುದನ್ನು ಸಂವಿಧಾನದ ಹಕ್ಕಾಗಿ ತಂದಿದ್ದನ್ನು ನೆನಪಿಸಿಕೊಳ್ಳಬೇಕು. ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷೆಯಾಗಿ, ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಆಗಿದ್ದಾಗ ಇದನ್ನು ಜಾರಿಗೆ ತರಲಾಗಿತ್ತು. ಆದರೆ, ಬಿಜೆಪಿಯ ಕೇಂದ್ರ ಸರ್ಕಾರ ಬಡವರಿಗೆ ಅಕ್ಕಿ ಯೋಜನೆ ಜಾರಿ ಮಾಡಿದೆ ಎಂದು ಕೆಲವರು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಇದು ಯುಪಿಎ ಸರ್ಕಾರದ ಯೋಜನೆ ಎಂಬುದು ಸತ್ಯ. ನಮ್ಮ ರಾಜ್ಯದಲ್ಲಿ ಮಾತ್ರ ಅನ್ನಭಾಗ್ಯ ಯೋಜನೆ ಮೂಲಕ ಜನರಿಗೆ ಉಚಿತವಾಗಿ ಅಕ್ಕಿ ನೀಡಿ, ರಾಜ್ಯವನ್ನು ಹಸಿವು ಮುಕ್ತ ಮಾಡುವ ಪ್ರಯತ್ನ ನಡೆದಿದೆ. ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಈ ರೀತಿ ಜಾರಿ ಮಾಡಿಲ್ಲ. ಈಗ ನಾವು ಕೊಟ್ಟ ಮಾತಿನಂತೆ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದೇವೆ. 10 ಕೆಜಿ ಅಕ್ಕಿ ನೀಡುವವರೆಗೂ ಹೆಚ್ಚುವರಿ ಐದು ಕೆಜಿ ಅಕ್ಕಿಗೆ ಹಣವನ್ನು ನೀಡಲು ಸರ್ಕಾರ ತೀರ್ಮಾನಿಸಿದ್ದು, ಇಂದು ಫಲಾನುಭವಿಗಳಿಗೆ ಹಣ ನೀಡುತ್ತಿದ್ದೇವೆ. ಪ್ರತಿ ನಿತ್ಯ ನಾಲ್ಕೈದು ಜಿಲ್ಲೆಯ ಫಲಾನುಭವಿಗಳ ಖಾತೆಗೆ ಹಣ ಜಮಾವಣೆ ಆಗಲಿದೆ ಎಂದು ತಿಳಿಸಿದರು.
ಈ ವರ್ಷ ನಾವು ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಈ ಸಂದರ್ಭದಲ್ಲಿ ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಸದನದಲ್ಲಿ ಯಾರಿಗೆ ಉತ್ತರ ನೀಡಬೇಕೋ ನೀಡುತ್ತೇನೆ. ನಾವು ಬಸವಣ್ಣನ ನಾಡಿನವರು, ನುಡಿದಂತೆ ನಡೆದಿದ್ದೇವೆ. ನಾನು ಈ ಹಿಂದೆ ಹೇಳಿದ್ದಂತೆ 200 ಯೂನಿಟ್ ಉಚಿತ, 2 ಸಾವಿರ ಖಚಿತ, 10 ಕೆಜಿ ಅಕ್ಕಿ ನಿಶ್ಚಿತ ಎಂಬುದನ್ನು ಮಾಡಿದ್ದೇವೆ. ನಮ್ಮ ಈ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ನಾವು ಈ ಅನ್ನಭಾಗ್ಯ ಯೋಜನೆಯನ್ನು ಯಾವ ರೀತಿ ಜಾರಿಗೆ ತರುತ್ತಿದ್ದೇವೆ ಎಂಬುದರ ಬಗ್ಗೆ ವಿವಿಧ ರಾಜ್ಯಗಳ ವಿವಿಧ ಪಕ್ಷಗಳ ನಾಯಕರು ಮಾಹಿತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವಾಗಲು ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ 4 ರಿಂದ 5 ಸಾವಿರ ರೂಪಾಯಿಯಷ್ಟು ನೆರವಾಗಲಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ಈ ರೀತಿ ನೆರವು ನೀಡುತ್ತಿದೆ. ಆಹಾರ ಸಚಿವರ ನೇತೃತ್ವದಲ್ಲಿ ಈ ಯೋಜನೆಯನ್ನು ಬಹಳ ಉತ್ತಮವಾಗಿ ಜಾರಿಗೊಳಿಸಲಾಗುತ್ತಿದೆ ಎಂದರು.
ಇದನ್ನೂ ಓದಿ:Annabhagya scheme: ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಸಿಎಂ ಚಾಲನೆ.. ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ