ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಜಿ ಸಚಿವ ಆರ್.ವಿ ದೇಶಪಾಂಡೆ ಅವರನ್ನ ಭೇಟಿ ಮಾಡಿ ಚರ್ಚಿಸಿದರು.
ಶುಕ್ರವಾರ ಸಂಜೆ ಆರ್.ವಿ ದೇಶಪಾಂಡೆ ಅವರನ್ನು ಭೇಟಿ ಮಾಡಲು ಬಂದಿದ್ದ ಡಿಕೆಶಿ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಿದರು. ಇದಾದ ಬಳಿಕ ಅವರೊಂದಿಗೆ ಡಿಕೆಶಿ ಅರ್ಧ ಗಂಟೆಗೂ ಹೆಚ್ಚು ಕಾಲ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರು. ಶುಕ್ರವಾರ ಬೆಳಿಗ್ಗೆ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಂಡಿದ್ದ ಶಿವಕುಮಾರ್ ಮಧ್ಯಾಹ್ನ 2 ಗಂಟೆಯಿಂದ ನಿರಂತರ ಐದಾರು ಗಂಟೆ ಕಾಲ ಕೆಪಿಸಿಸಿ ವಿವಿಧ ಜಿಲ್ಲೆಗಳ ಪದಾಧಿಕಾರಿಗಳ ಸಭೆ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯ ಬಳಿಕ ನಿವಾಸಕ್ಕೆ ತೆರಳಿದ ಅವರು ಅಲ್ಲಿಂದ ಮಾಜಿ ಸಚಿವ ಆರ್.ವಿ ದೇಶಪಾಂಡೆ ನಿವಾಸಕ್ಕೆ ತೆರಳಿ ಸಮಾಲೋಚಿಸಿದರು. ಕೆಪಿಸಿಸಿ ಮಾಜಿ ಅಧ್ಯಕ್ಷರು ಆಗಿರುವ ದೇಶಪಾಂಡೆ ಪಕ್ಷವನ್ನು ಮುನ್ನಡೆಸುವ ನಿಟ್ಟಿನಲ್ಲಿ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ.
ಪ್ರತಿದಿನ ಒಂದಿಬ್ಬರು ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಸಮಾಲೋಚಿಸುತ್ತಿರುವ ಶಿವಕುಮಾರ್ ಕೆಲ ಹಿರಿಯ ನಾಯಕರನ್ನ ವಿಶ್ವಾಸಕ್ಕೆ ಪಡೆದು ಪಕ್ಷ ಬಲಪಡಿಸುವ ಹಾಗೂ ಮುನ್ನಡೆಸುವ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಇದರ ಭಾಗವಾಗಿಯೇ ಶುಕ್ರವಾರ ದೇಶಪಾಂಡೆ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿ ವಾಪಸ್ ಆಗಿದ್ದಾರೆ.