ಬೆಂಗಳೂರು: ರಾಮನಗರ ಜಿಲ್ಲೆಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು, ಸರ್ಕಾರಿ ನೌಕರರು ತಾವು ಕೆಲಸ ಮಾಡುವ ಕೇಂದ್ರ ಸ್ಥಳದಲ್ಲೇ ವಾಸ್ತವ್ಯ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿನ ಮಳೆ ಬೆಳೆ ಸ್ಥಿತಿಗತಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಜಿಲ್ಲಾಧಿಕಾರಿಗಳ ವಿಡಿಯೋ ಸಂವಾದದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ನೌಕರರ ಮನೆ ಒಂದು ಊರಲ್ಲಿ, ಕೆಲಸ ಇನ್ನೊಂದು ಊರಲ್ಲಿ ಅಂತ ಆಗಬಾರದು. ಬೇರೆ ಊರಲ್ಲಿ ಇದ್ದರೆ ತುರ್ತು ಸಂದರ್ಭದಲ್ಲಿ ಜನರಿಗೆ ಸಿಗೋಲ್ಲ. ಅದೇ ರೀತಿ ಎಲ್ಲ ಜಿಲ್ಲೆಗಳಲ್ಲಿಯೂ ಆಗಬೇಕು, ಕೆಲಸ ಮಾಡುವ ಸ್ಥಳದಲ್ಲೇ ಮನೆ ಮಾಡಿಕೊಂಡು, ಅಗತ್ಯ ಸಮಯದಲ್ಲಿ ಜನರಿಗೆ ಸಿಗಬೇಕು. ಅವರ ಮನೆ ಫೋಟೋ, ವಿಳಾಸ, ಫೋನ್ ನಂಬರ್ ಸೇರಿದಂತೆ ಒಂದು ಡೈರಿ ತರಬೇಕು. ಅಧಿಕಾರಿಗಳು ವಾಟ್ಸ್ಆ್ಯಪ್ ಗ್ರೂಪ್ ಮಾಡಬೇಕು ಎಂದು ಸೂಚನೆ ನೀಡಿದರು.
ನಿಮಗೆ ಹೇಗಿದ್ದರೂ ಮೊದಲೇ ಹವಾಮಾನ ಇಲಾಖೆಯಿಂದ ಹವಾಮಾನ ಮುನ್ಸೂಚನೆ ದೊರೆತಿರುತ್ತದೆ. ಆ ವರದಿ ಆಧರಿಸಿ ಮಾಧ್ಯಮ ಪ್ರಚಾರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ. ಇಂತಹ ದಿನ ಇಷ್ಟು ಪ್ರಮಾಣದ ಮಳೆ ಬರುತ್ತೆ. ಹೆಚ್ಚು ಮಳೆ, ಪ್ರವಾಹ ಬಂದಾಗ ಜನ ಆಚೆ ಬರೋದು ಬೇಡ ಅಂತ ಮಾಧ್ಯಮದ ಮೂಲಕ ಸಾರಬೇಕು. ಆಗ ಅನಾಹುತ ತಪ್ಪಿಸಬಹುದು. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿ. ದುರಂತ ತಪ್ಪಿಸಿ. ಅನಾಹುತ ಆದಮೇಲೆ ವ್ಯಾಖ್ಯಾನ ಮಾಡುವುದರಿಂದ ಪ್ರಯೋಜನ ಇಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕರಾವಳಿ ಭಾಗದ ವಲಸೆ ತಪ್ಪಿಸಿ:ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಯ ಜನ ಮುಂಬೈಗೆ ವಲಸೆ ಹೋಗುತ್ತಿದ್ದಾರೆ. ಉದ್ಯೋಗ ಅವಕಾಶ ಸೃಷ್ಟಿಸಿ ವಲಸೆ ತಪ್ಪಿಸಬೇಕು. ಹಿಂದೆ ಕೋಮು ಸಂಘರ್ಷ ಮತ್ತಿತರ ಕಾರಣಗಳಿಂದ ಯಾರೂ ಬಂಡವಾಳ ಹೂಡಲು ಮುಂದೆ ಬರುತ್ತಿರಲಿಲ್ಲ. ಉದ್ಯೋಗ ಸೃಷ್ಟಿ ಆಗುತ್ತಿರಲಿಲ್ಲ. ಈಗ ನಮ್ಮ ಸರ್ಕಾರ ಬಂದಿದೆ. ಹಿಂದಿನ ಪರಿಸ್ಥಿತಿ ಬದಲಾಗಬೇಕು. ಜನಸ್ನೇಹಿ ವಾತಾವರಣ ಸೃಷ್ಟಿ ಆಗಬೇಕು ಅದಕ್ಕೆ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಜಿ. ಪರಮೇಶ್ವರ್, ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಎಂ.ಸಿ.ಸುಧಾಕರ್, ಲಕ್ಷ್ಮಿ ಹೆಬ್ಬಾಳ್ಕರ್, ಪ್ರಿಯಾಂಕ ಖರ್ಗೆ, ಈಶ್ವರ್ ಖಂಡ್ರೆ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ , ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.