ಕರ್ನಾಟಕ

karnataka

ETV Bharat / state

ಕೆಪಿಸಿಸಿ ಪುನಾರಚನೆ ಕಸರತ್ತು.. ದೆಹಲಿಗೆ ತೆರಳಿದ ಡಿಕೆಶಿ - reshuffling kpcc ,

ಕೆಪಿಸಿಸಿ ಪುನಾರಚನೆ ಸಂಬಂಧ ಪಕ್ಷದ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲು ಪಕ್ಷ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ಕೂಡಲೇ ಪಕ್ಷದ ವಿವಿಧ ಸಮಿತಿಗಳ ರಚನೆಗೆ ಅವಕಾಶ ನೀಡುವಂತೆ ಹೈಕಮಾಂಡ್ ನಾಯಕರಿಗೆ ಶಿವಕುಮಾರ್ ಎಂದು ಮನವಿ ಮಾಡಲಿದ್ದಾರೆ.

dks
dks

By

Published : Jun 20, 2021, 3:29 PM IST

ಬೆಂಗಳೂರು: ಕೆಪಿಸಿಸಿ ಪುನಾರಚನೆ ಸಂಬಂಧ ಪಕ್ಷದ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲು ಡಿ ಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ನಿನ್ನೆ ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಿರುವ ಅವರು ಇಂದು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.

ಅಧ್ಯಕ್ಷರು ಐವರು ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿದರೆ ಪಕ್ಷದ ಯಾವ ಸಮಿತಿಯು ಸದ್ಯಕ್ಕೆ ಅಸ್ತಿತ್ವದಲ್ಲಿಲ್ಲ. ಕಳೆದ ಎರಡು ವರ್ಷಗಳಿಂದಲೂ ಸಮಿತಿಗಳು ಕಾರ್ಯನಿರ್ವಹಿಸುತ್ತಿಲ್ಲ. ಇನ್ನೆರಡು ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರುವ ಹಿನ್ನೆಲೆ ಈಗಿನಿಂದಲೇ ವಿವಿಧ ಸಮಿತಿಗಳನ್ನು ರಚಿಸಿ ಪಕ್ಷವನ್ನು ಸಂಘಟಿಸುವ ಕಾರ್ಯಕ್ಕೆ ಚಾಲನೆ ನೀಡಬೇಕಿದೆ. ಕಳೆದ ಒಂದು ವರ್ಷದಿಂದ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಕಾರ್ಯವೈಖರಿಯನ್ನು ಅವಲೋಕಿಸಿದ್ದು, ಇದೀಗ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿ ಜವಾಬ್ದಾರಿ ಹಂಚಿಕೆ ಮಾಡುವುದಕ್ಕೆ ಇದು ಸಕಾಲ. ಕೂಡಲೇ ಪಕ್ಷದ ವಿವಿಧ ಸಮಿತಿಗಳ ರಚನೆಗೆ ಅವಕಾಶ ನೀಡುವಂತೆ ಹೈಕಮಾಂಡ್ ನಾಯಕರಿಗೆ ಶಿವಕುಮಾರ್ ಎಂದು ಮನವಿ ಮಾಡಲಿದ್ದಾರೆ.

ಹೆಚ್ಚಿದ ನಿರಾಸೆ:

ಪ್ರದೇಶ ಕಾಂಗ್ರೆಸ್ ಸಮಿತಿ ವಿವಿಧ ವಿಭಾಗಗಳಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದಿಂದ ಕಾರ್ಯಕರ್ತರಲ್ಲಿ ನಿರಾಸೆ ಹೆಚ್ಚಾಗುತ್ತಿದೆ. ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವ ಸಲುವಾಗಿ 2019ರ ಜೂನ್ ತಿಂಗಳಲ್ಲಿ ಅಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿಯಾಗಿದ್ದ ಕೆ ಸಿ ವೇಣುಗೋಪಾಲ್, ಅಂದು ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರಾಗಿದ್ದ ಈಶ್ವರ್ ಖಂಡ್ರೆ ಸ್ಥಾನವನ್ನು ಹೊರತುಪಡಿಸಿ ಉಳಿದೆಲ್ಲ ಸ್ಥಾನಗಳು ಹಾಗೂ ವಿವಿಧ ಸಮಿತಿಗಳನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದರು. ಶೀಘ್ರವೇ ಹೊಸ ಪದಾಧಿಕಾರಿಗಳು ನೇಮಕಗೊಳ್ಳಲಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಹಾಗೂ ಚುನಾವಣೆ ನಂತರದ ಬೆಳವಣಿಗೆಗಳನ್ನು ಗಮನಿಸಿರುವ ಹೈಕಮಾಂಡ್, ಸಮಿತಿ ವಿಸರ್ಜನೆಯ ನಿಲುವು ತಾಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹೊಸಮುಖಗಳನ್ನು ನೇಮಿಸಲು ನಿರ್ಧರಿಸಿತ್ತು.

ಆದರೆ ನಂತರದ ದಿನಗಳಲ್ಲಿ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಉಂಟಾಯಿತು. ಇದಾದ ಬಳಿಕ ರಾಜ್ಯದಲ್ಲಿ ಆಪರೇಷನ್ ಕಮಲ ನಡೆದು 17 ಶಾಸಕರು ರಾಜೀನಾಮೆ ನೀಡಿದ್ದರು. ಕಾಂಗ್ರೆಸ್​​ನ 14 ಶಾಸಕರು ಈ ಸಂದರ್ಭ ಪಕ್ಷ ತ್ಯಜಿಸಿದ್ದರು. 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡಮಟ್ಟದ ಹಿನ್ನಡೆ ಅನುಭವಿಸಿತ್ತು. ಲೋಕಸಭೆ ಚುನಾವಣೆ ಸೋಲು ಹಾಗೂ ವಿಧಾನಸಭೆ ಉಪಚುನಾವಣೆ ಸೋಲಿನಿಂದ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ದಿನೇಶ್ ಗುಂಡೂರಾವ್ ಕೆಳಗಿಳಿದರು. ಕೆಲ ತಿಂಗಳು ಕೇವಲ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪಕ್ಷದ ಚಟುವಟಿಕೆಯನ್ನು ಮುನ್ನಡೆಸಿಕೊಂಡು ಸಾಗಿದರು.

2020 ರ ಮಾರ್ಚ್ ತಿಂಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮ್ಮದ್​ ಅವರನ್ನು ನೇಮಿಸಿ ಹೈಕಮಾಂಡ್ ಆದೇಶ ಹೊರಡಿಸಿತು. ಕೊರೊನಾ ಹಿನ್ನೆಲೆ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ಅಧಿಕೃತ ಪದಗ್ರಹಣ ಅದೇ ವರ್ಷ ಜುಲೈ 2 ರಂದು ನಡೆಯಿತು.

ಪದಾಧಿಕಾರಿ ನೇಮಕವಾಗಿಲ್ಲ:

ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಿ ಕೆ ಶಿವಕುಮಾರ್ ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳಿಗೆ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪಕ್ಷದ ವಿವಿಧ ಹುದ್ದೆಗಳಿಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಒಂದರ ನಂತರ ಒಂದರಂತೆ ಬಂದ ಉಪಚುನಾವಣೆ ಹಾಗೂ ಪಕ್ಷದ ವಿವಿಧ ಬೆಳವಣಿಗೆಗಳ ಹಿನ್ನೆಲೆ ಯಾವುದೇ ನೇಮಕ ಆಗಿಲ್ಲ. ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಒಂದು ವರ್ಷಗಳು ಕಳೆದರೂ ಸಹ ಶಿವಕುಮಾರ್​ಗೆ ಇದುವರೆಗೂ ಮತ್ತಿಬ್ಬರು ಕಾರ್ಯಾಧ್ಯಕ್ಷರ ನೇಮಕ ಹೊರತುಪಡಿಸಿ ಬೇರಾವುದೇ ನೇಮಕವನ್ನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ಒಂದೆಡೆ ಪಕ್ಷದ ಶಾಸಕಾಂಗ ನಾಯಕ ಹಾಗೂ ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಆಪ್ತ ಬಳಗವನ್ನು ಪಕ್ಷದ ಚಟುವಟಿಕೆಯಲ್ಲಿ ಸೇರ್ಪಡೆ ಮಾಡಲು ಪ್ರಯತ್ನ ನಡೆಸಿದ್ದಾರೆ. ಸಾಕಷ್ಟು ಕಾರ್ಯಕರ್ತರು ಹಾಗೂ ಮುಖಂಡರು ಸಮಿತಿಗಳ ನೇಮಕದಲ್ಲಿ ವಿಳಂಬವಾಗುತ್ತಿರುವುದಕ್ಕೆ ಬೇಸರ ಪಡಿಸುತ್ತಿದ್ದಾರೆ. ಸಾಕಷ್ಟು ಹೊಸಬರು ಸಮಿತಿಯಲ್ಲಿ ಸ್ಥಾನ ಪಡೆಯಲು ಪ್ರಯತ್ನ ನಡೆಸಿದ್ದರೆ ಹಳಬರು ಸಹ ತಮ್ಮದೇ ಆದ ನಿಟ್ಟಿನಲ್ಲಿ ಪೈಪೋಟಿ ನಡೆಸಿದ್ದಾರೆ. ಇದೀಗ ಒಂದು ಪಟ್ಟಿ ಸಮೇತ ಡಿ ಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರು ಒಪ್ಪಿದರೆ ಮುಂದಿನ ಕೆಲವೇ ದಿನಗಳಲ್ಲಿ ವಿವಿಧ ಸಮಿತಿಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಇದೆ.

ABOUT THE AUTHOR

...view details