ಬೆಂಗಳೂರು: ನಾವು ರಾಜ್ಯ ಹಾಗೂ ದೇಶದ ರೈತರ ಪರ ಧ್ವನಿ ಎತ್ತಿದ್ದೇವೆ. ಕೆಲವು ಸಚಿವರು ನಾವು ಅಸ್ತಿತ್ವ ಉಳಿಸಿಕೊಳ್ಳಲು ಮಾಡಿದ್ದೇವೆ, ನಾವು ನಿರುದ್ಯೋಗಿಗಳು ಎಂದಿದ್ದಾರೆ. ನಿಜ, ಬಿಜೆಪಿ ಆಡಳಿತದಲ್ಲಿ ಇಡೀ ದೇಶವೇ ನಿರುದ್ಯೋಗಿಯಾಗಿದೆ. ವಿರೋಧ ಪಕ್ಷವಾದ ನಾವೂ ನಿರುದ್ಯೋಗಿಗಳೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ಮುಖ್ಯಮಂತ್ರಿಗಳಿಗೆ, ಅವರ ಪದವಿಗೆ, ಹಿರಿತನಕ್ಕೆ ಗೌರವ ನೀಡುತ್ತೇವೆ. ಇವತ್ತೂ ಗೌರವಿಸುತ್ತೇವೆ, ನಾಳೆಯೂ ಗೌರವಿಸುತ್ತೇವೆ. ಅವರ ಪ್ರಕಾರ ನಾವೆಲ್ಲಾ ಸತ್ತ ಕುದುರೆಗಳಂತೆ. ನಮ್ಮ ಪಕ್ಷವೇ ಇಲ್ಲ. ಇನ್ನು ಸಾಮ್ರಾಟ್ ಅಶೋಕರ ಪ್ರಕಾರ ನಾವು ನಿರುದ್ಯೋಗಿಗಳು. ಅದು ನಿಜ, ಬಿಜೆಪಿ ಆಡಳಿತದಲ್ಲಿ ದೇಶದ ಎಲ್ಲೆಡೆ ನಿರುದ್ಯೋಗ ಹೆಚ್ಚಾಗಿದ್ದು, ನಾವು ಕೂಡ ನಿರುದ್ಯೋಗಿಗಳಾಗಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶಕ್ಕೆ ಕೊಟ್ಟ ಬಹುದೊಡ್ಡ ಬಳುವಳಿ ನಿರುದ್ಯೋಗ ಸಮಸ್ಯೆ ಎಂದು ಅಸಮಾಧಾನ ಹೊರಹಾಕಿದರು.