ಬೆಂಗಳೂರು : ಸರ್ಕಾರ ಘೋಷಣೆ ಮಾಡಿರುವುದು ರಿಯಲ್ ಪ್ಯಾಕೇಜ್ ಅಲ್ಲ, ರೀಲ್ ಪ್ಯಾಕೇಜ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರು, ನೇಕಾರರು, ಕುಂಬಾರರಿದ್ದಾರೆ, ಇವರಲ್ಲಿ ಯಾರು ಸಹಾಯಧನಕ್ಕೆ ಅರ್ಜಿ ಹಾಕ್ತಾರೆ? ನಿಜವಾಗಿ ಸಂಕಷ್ಟಕ್ಕೊಳಗಾದವರು ಅರ್ಜಿ ಹಾಕೋಕೆ ಆಗುತ್ತಾ? ಅವರಿಗೆ ಏನು ಎತ್ತ ಅನ್ನೋದೇ ಗೊತ್ತಾಗಲ್ಲ. ಅವರು ಆನ್ಲೈನ್ ಅರ್ಜಿ ಹಾಕೋಕೆ ಸಾಧ್ಯನಾ? ಇದೆಲ್ಲ ಗೊತ್ತಿದ್ದರೆ ವಿಧಾನಸೌಧಕ್ಕೆ ಬಂದು ಕೆಲಸ ಮಾಡ್ತಿದ್ರು. ಗೊತ್ತಿಲ್ಲದಿರುವುದರಿಂದ ತಾನೇ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರೈತರ ಬೆಳೆಯನ್ನು ಸರ್ಕಾರ ಖರೀದಿಸಲಿ:
ನಿನ್ನೆ ಸಿನಿಮಾದವರು ನನ್ನನ್ನು ಭೇಟಿ ಮಾಡಿದ್ದರು, ಅವರ ನೋವು, ದುಃಖ ಎಲ್ಲವನ್ನೂ ಹೇಳಿದ್ದಾರೆ. ಉತ್ತರ ಕರ್ನಾಟಕದ ರೈತರ ಪರಿಸ್ಥಿತಿ ಅಯೋಮಯವಾಗಿದೆ. ಅವರನ್ನು ಯಾರು ಕಾಪಾಡಬೇಕೋ ಗೊತ್ತಿಲ್ಲ. ನಾನು ಖುದ್ದಾಗಿ ನಿನ್ನೆ ಅಲ್ಲಿಗೆ ಭೇಟಿ ನೀಡಿದ್ದೇನೆ. ನಾನು ಸಿಎಂಗೆ ಮನವಿ ಮಾಡುತ್ತೇನೆ, ರೈತರ ತರಕಾರಿ, ಹೂ ಎಲ್ಲವನ್ನೂ ನೀವೇ ಖರೀದಿ ಮಾಡಿ. ಎಷ್ಟು ದರಕ್ಕೆ ಖರೀದಿ ಮಾಡ್ತೀರೋ ಮಾಡಿ. ಕೃಷಿ, ತೋಟಗಾರಿಕೆ ಇಲಾಖೆಯಿಂದ ಖರೀದಿಸಿ ಎಂದು ಹೇಳಿದರು.
ದೇವೇಗೌಡರ ಉತ್ಸಾಹವನ್ನು ಸ್ವಾಗತಿಸುತ್ತೇನೆ:
ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಪೂರೈಸಿದ ಕುರಿತು ಮಾತನಾಡಿ, ದೆಹಲಿಯಲ್ಲಿ ದಕ್ಷಿಣದವರು ರಾಜಕಾರಣ ಮಾಡಲು ಸಾಧ್ಯವಿಲ್ಲ. ಅಂತದರಲ್ಲಿ ಇವರು ಪ್ರಧಾನಿಯಾಗಿದ್ದರು. ರಾಜ್ಯದ ದುಃಖ ದುಮ್ಮಾನಗಳಿಗೆ ಧ್ವನಿಯಾಗಿದ್ದರು. ಅವರ ಉತ್ಸಾಹವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡಲ್ಲ:
ಸಚಿವ ಸಿಪಿ ಯೋಗೇಶ್ವರ್ ದೆಹಲಿ ಭೇಟಿ ವಿಚಾರ ಮಾತನಾಡಿ, ಇವರೆಲ್ಲರು ಪವರ್ ಬೆಗ್ಗರ್ಸ್, ಈ ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡುವುದು ಬೇಡ. ಯಡಿಯೂರಪ್ಪ ಎಲ್ಲರನ್ನು ಕರೆತಂದರು, ಈಗ ಅವರೇ ಅನುಭವಿಸುತ್ತಿದ್ದಾರೆ. ಯಾರು ಎಲ್ಲಿಗೆ ಬೇಕಾದ್ರೂ ಹೋಗಲಿ. ನಾವು ಮಾಡಿದ್ದೇ ನಾವು ಅನುಭವಿಸುತ್ತಿದ್ದೇವೆ. ನಾವು ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡಲ್ಲ ಎಂದರು.
ಡೆತ್ ಆಡಿಟ್ ಬಿಡುಗಡೆ ಮಾಡಿ :
ಕೊರೊನಾ ಸಾವಿನ ಬಗ್ಗೆ ಸುಳ್ಳು ಅಂಕಿಅಂಶ ಕೊಡ್ತಿಲ್ಲ ಎಂಬ ಸಚಿವ ಸುಧಾಕರ್ ಹೇಳಿಕೆ ಬಗ್ಗೆ ಮಾತನಾಡಿ, ಸುಧಾಕರ್ ಅಣ್ಣಾ ನೀವು ಔಷಧಿ ಕೊಡಿಸುವುದನ್ನು ನೋಡಿ. ಡೆತ್ ಆಡಿಟ್ ಕೆಲಸ ನಿಮಗೆ ಬೇಡ. ಅದನ್ನು ಬಿಬಿಎಂಪಿ, ಮುನ್ಸಿಪಲ್, ರೆವಿನ್ಯೂ ಡಿಪಾರ್ಟ್ಮೆಂಟ್ ನೋಡಿಕೊಳ್ಳುತ್ತದೆ. ಔಷಧಿ, ಲಸಿಕೆ ಬಗ್ಗೆ ನೀವು ನೋಡಿಕೊಳ್ಳಿ. ರಾಜಸ್ಥಾನದಲ್ಲಿ ಡೆತ್ ಆಡಿಟ್ ರಿಪೋರ್ಟ್ ಬಿಡುಗಡೆ ಆಗಿದೆ, ನೀವು ಬಿಡುಗಡೆ ಮಾಡಿ ಎಂದು ಹೇಳಿದರು.
ಓದಿ : ದಿಢೀರ್ ದೆಹಲಿಗೆ ಹಾರಿದ ಸಿಎಂ ಪುತ್ರ ವಿಜಯೇಂದ್ರ: ರಾಜ್ಯ ಬಿಜೆಪಿಯಲ್ಲಿ ಸಂಚಲನ