ಕರ್ನಾಟಕ

karnataka

ETV Bharat / state

ಬಿಜೆಪಿ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಾಗ ಐಟಿ, ಇಡಿ ಎಲ್ಲಿದ್ದವು: ಡಿಕೆ ಶಿವಕುಮಾರ್ ಪ್ರಶ್ನೆ - ED raid on jameer ahmadkhan

ಮಾಜಿ ಸಚಿವ ಜಮೀರ್ ಅಹಮದ್ ಖಾನ್​ ಅವರ ಮನೆಯ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತವಾಗಿದೆ. ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ನಾಯಕರು ಹಣ ಖರ್ಚು ಮಾಡಿದ ಬಗ್ಗೆ ಆರೋಪ ಕೇಳಿ ಬಂದಾಗ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸಂಸ್ಥೆಗಳು ಎಲ್ಲಿದ್ದವು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

DK Shivkumar
ಡಿಕೆ ಶಿವಕುಮಾರ್

By

Published : Aug 5, 2021, 5:14 PM IST

ನವದೆಹಲಿ:ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ನಾಯಕರು ಹಣ ಖರ್ಚು ಮಾಡಿದ ಬಗ್ಗೆ ಆರೋಪ ಕೇಳಿ ಬಂದಾಗ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸಂಸ್ಥೆಗಳು ಎಲ್ಲಿದ್ದವು, ಬಿಜೆಪಿಯವರ ವ್ಯವಹಾರಗಳೆಲ್ಲ ಸರಿಯಾಗಿದ್ದವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಇಡಿ ದಾಳಿ ಖಂಡನೀಯ:

ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರಾದ ಜಮೀರ್ ಅಹ್ಮದ್ ಅವರ ಮನೆ, ಕಚೇರಿ ಮೇಲಿನ ಇಡಿ ದಾಳಿ ಖಂಡನೀಯ. ಕಾನೂನು ಪ್ರಕಾರ ಅದನ್ನು ಎದುರಿಸಲು ಜಮೀರ್ ಅವರು ಸಮರ್ಥರಿದ್ದಾರೆ. ಎರಡು ವರ್ಷಗಳ ಹಿಂದೆ ಇಡಿ ಅಧಿಕಾರಿಗಳು ಜಮೀರ್ ಅವರಿಗೆ ನೋಟಿಸ್ ಜಾರಿ ಮಾಡಿ ಅವರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ.

ಅವರ ಪ್ರಶ್ನೆಗಳಿಗೆ ಉತ್ತರ ನೀಡಿರುವುದಾಗಿ ಜಮೀರ್ ಅವರೇ ನನಗೆ ತಿಳಿಸಿದ್ದರು. ಈಗಿನ ಸಂದರ್ಭದಲ್ಲಿ ದಾಳಿ ಅಗತ್ಯ ಇರಲಿಲ್ಲ. ಯಾವ ರೀತಿ ಈ ಕಿರುಕುಳ ನೀಡಲಾಗುತ್ತದೆ ಎಂಬುದು ನನಗೂ ಗೊತ್ತಿದೆ ಎಂದಿದ್ದಾರೆ.

ಇಡಿ ದಾಳಿ ಖಂಡನೀಯ:

ಜಮೀರ್ ಹೇಳಿಕೆಗಳು ಮುಗಿದಿರುವಾಗ ಅವರ ನಿವಾಸ ಹಾಗೂ ಆಪ್ತರ ಮನೆಗಳ ಮೇಲೆ ದಾಳಿ ಮಾಡಿ ಕಿರುಕುಳ ನೀಡುತ್ತಿರುವುದು ಖಂಡನೀಯ. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಎಸಿಬಿ ನಿಜಕ್ಕೂ ಕಾರ್ಯಪ್ರವೃತ್ತವಾಗಿದ್ದಾರೆ.

ಮಾಜಿ ಸಚಿವ ಶ್ರೀನಿವಾಸಗೌಡರು ವಿಧಾನಸಭೆಯಲ್ಲಿ ಆಪರೇಷನ್ ಕಮಲದ ವಿಚಾರವಾಗಿ ಸಿ.ಪಿ. ಯೋಗೇಶ್ವರ್ ಹಾಗೂ ಅಶ್ವತ್ಥ ನಾರಾಯಣ ಅವರು 30 ಕೋಟಿ ಹಣದ ಆಮಿಷ ನೀಡಿ 5 ಕೋಟಿ ಹಣವನ್ನು ನನ್ನ ಮನೆಯಲ್ಲಿ ಇಟ್ಟು ಹೋಗಿದ್ದರು ಎಂದು ಆರೋಪ ಮಾಡಿದ್ದರು.

ಆಗ ಈ ಇಲಾಖೆಗಳು ಎಲ್ಲಿ ಹೋಗಿದ್ದವು. ಯೋಗೇಶ್ವರ್ ಮನೆ ಮಾರಾಟ ಮಾಡಿ 9 ಕೋಟಿ ಹಣ ಖರ್ಚು ಮಾಡಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಅವರು ಹೇಳಿದಾಗ ಈ ಇಲಾಖೆಗಳು ಏನಾಗಿದ್ದವು ಎಂದು ಪ್ರಶ್ನಿಸಿದ್ದಾರೆ.

ತಾರತಮ್ಯ ಏಕೆ:

ಅವರ ಮೇನೆ ಮೇಲೆ ದಾಳಿ ಆದವಾ, ಅವರಿಗೆ ಈ ತನಿಖಾ ಸಂಸ್ಥೆಗಳಿಂದ ನೋಟಿಸ್ ಜಾರಿಯಾಯ್ತಾ, ವಿಧಾನಸಭೆಯಲ್ಲಿ ನೀಡಿದ ಹೇಳಿಕೆಗಿಂತ ಬೇರೆ ಸಾಕ್ಷಿ ಏನು ಬೇಕಿತ್ತು. ಇವುಗಳು ಭ್ರಷ್ಟಾಚಾರ, ಹಣ ಅವ್ಯವಹಾರದ ಪ್ರಕರಣಗಳಲ್ಲವೇ ಯಾಕೆ ಈ ಬಗ್ಗೆ ಪ್ರಕರಣಗಳು ದಾಖಲಾಗಲಿಲ್ಲ. ನಾನು ಅವರ ವೈಯಕ್ತಿಕ ವ್ಯವಹಾರಗಳ ಬಗ್ಗೆ ಮಾತನಾಡುತ್ತಿಲ್ಲ.

ಅವರ ಬಾಯಿಂದ ಬಂದ ನುಡಿಮುತ್ತುಗಳನ್ನೇ ಆಧರಿಸಿ ಪ್ರಶ್ನೆ ಮಾಡುತ್ತಿದ್ದೇನೆ. ಯಾರ್ಯಾರ ಅನುಕೂಲಕ್ಕೆ ಹೇಗೆ ಬೇಕೋ ಹಾಗೆ ಈ ಸಂಸ್ಥೆಗಳು ನಡೆದುಕೊಳ್ಳುತ್ತಿವೆ. ಅಧಿಕಾರ ಇದೆ ಎಂದು ಈ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ವಿಚಾರವಾಗಿ ಕಾನೂನು ರೀತಿಯಲ್ಲಿ ಜಮೀರ್ ಅವರು ಉತ್ತರ ನೀಡಲಿದ್ದಾರೆ. ಅವರಿಗೆ ಆ ಶಕ್ತಿ ಇದೆ.

ಆದರೆ, ಕಾಂಗ್ರೆಸ್ ನಾಯಕರಿಗೆ ಒಂದು ಕಾನೂನು, ಬಿಜೆಪಿಯವರಿಗೆ ಇನ್ನೊಂದು ಕಾನೂನು ಎಷ್ಟು ಸರಿ, ಬಿಜೆಪಿಯವರೆಲ್ಲ ಬಹಳ ಸಾಚಾತನದಲ್ಲಿ ವ್ಯವಹಾರ ಮಾಡುತ್ತಿದ್ದಾರಾ, ಏಕೆ ಈ ತಾರತಮ್ಯ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓದಿ: ಜಮೀರ್ ನಿವಾಸದ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ

ದಾಳಿ ಮಾಡುವ ಅಗತ್ಯ ಏನಿತ್ತು? :

ಇಷ್ಟು ದಿನ ಯಾಕೆ ಸುಮ್ಮನಿದ್ದರು, ಏಳು ಬಾರಿ ಶಾಸಕರಾಗಿದ್ದ ರೋಷನ್ ಬೇಗ್ ಅವರು ಏನಾಗಿದ್ದಾರೆ ಎಂಬ ವಿಚಾರವಾಗಿ ನಾನು ಈಗ ಮಾತನಾಡುವುದಿಲ್ಲ. ನಿರ್ದಿಷ್ಟ ವರ್ಗಕ್ಕೆ ತೊಂದರೆ ನೀಡಲು ಈ ರೀತಿ ದಾಳಿಗಳು ನಡೆಯುತ್ತಿವೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.

ನೂರು ವರ್ಷವಾದ್ರೂ ಮೇಕೆದಾಟುಗೆ ಅನುಮತಿ ಸಿಗಲ್ಲ:

ಮೇಕೆದಾಟು ಯೋಜನೆಗೆ ನೂರು ವರ್ಷವಾದ್ರೂ ತಮಿಳುನಾಡು ಅನುಮತಿ ನೀಡಲ್ಲ. ಇದು ಯೋಜನೆ ರಾಜಕೀಯ ಇಚ್ಛಾಶಕ್ತಿ ವಿಚಾರ. ನಮ್ಮ ರಾಜ್ಯದಲ್ಲಿ ನಮ್ಮ ಹಣದಲ್ಲಿ ನಮ್ಮ ನೀರನ್ನು ಬಳಸಿಕೊಳ್ಳಲು ಈ ಯೋಜನೆ ರೂಪಿಸುತ್ತಿದ್ದೇವೆ. ನಾವು ಯಾರ ಪಾಲಿನ ನೀರನ್ನು ತಡೆಯುತ್ತಿಲ್ಲ. ನೀರು ಬಿಡುಗಡೆ ವಿಚಾರದಲ್ಲಿ ಕೇಂದ್ರದ ಸಮಿತಿಯದ್ದೆ ಪರಮಾಧಿಕಾರ.

ಈ ಯೋಜನೆಗೆ ಕೆಲವು ಇಲಾಖೆಗಳ ಅನುಮತಿ ಬೇಕಿದೆ ಅಷ್ಟೇ. ಅದನ್ನು ಕೊಡಬೇಕಾದ್ದು ಕೇಂದ್ರ ಸರ್ಕಾರದ ಕರ್ತವ್ಯ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಇದೆ. ರಾಜ್ಯ ಸರ್ಕಾರ ಯಾವುದೇ ರೀತಿಯ ಒತ್ತಡ ಬೇಕಾದರೂ ಹಾಕಲಿ. ನಾವು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಇದೇ ವೇಳೆ, ಡಿ ಕೆ ಶಿವಕುಮಾರ್​ ಹೇಳಿದರು.

ಓದಿ: ಜಮೀರ್ ನಿವಾಸದ ಮೇಲೆ ಇಡಿ ದಾಳಿ: ಕಾಂಗ್ರೆಸ್ ನಾಯಕರಲ್ಲಿ ಮತ್ತೆ ಆತಂಕ

ABOUT THE AUTHOR

...view details