ಬೆಂಗಳೂರು :ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕೇಂದ್ರದ ಮಾಜಿ ಸಚಿವ ಸಿ ಎಂ ಇಬ್ರಾಹಿಂ ಅವರನ್ನು ಬೆಂಗಳೂರಿನ ಬೆನ್ಸನ್‌ಟೌನ್ ನಿವಾಸದಲ್ಲಿ ಶನಿವಾರ ರಾತ್ರಿ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಸಿ ಎಂ ಇಬ್ರಾಹಿಂ ಕಾಂಗ್ರೆಸ್ ಬಿಡುವ ಮನ್ಸೂಚನೆ ಇರುವ ಹಿನ್ನೆಲೆ ಶನಿವಾರ ರಾತ್ರಿ ಭೇಟಿ ಮಾಡಿದ ಡಿಕೆಶಿ, ಸುದೀರ್ಘ ಚರ್ಚೆ ನಡೆಸಿದ್ದಾರೆ. ಪಕ್ಷದಲ್ಲಿ ನಿಮಗೆ ಗೌರವವಿದೆ. ಅಧಿಕಾರದಲ್ಲಿ ಇರದ ಹಿನ್ನೆಲೆ ತಮಗೆ ಯಾವುದೇ ಜವಾಬ್ದಾರಿಯುತ ಸ್ಥಾನ ಕಲ್ಪಿಸಲು ಇದುವರೆಗೂ ಸಾಧ್ಯವಾಗಿಲ್ಲ.
ಮುಂದಿನ ದಿನಗಳಲ್ಲಿ ಆದ್ಯತಾ ಅನುಸಾರ ತಮಗೆ ಅಧಿಕಾರ ನೀಡಲಾಗುವುದು. ಜೆಡಿಎಸ್ ಪಕ್ಷ ರಾಜ್ಯದಲ್ಲಿ ಮುಳುಗುತ್ತಿರುವ ಹಡಗು. ಅಲ್ಲಿ ತಮಗೆ ಯಾವುದೇ ಸ್ಥಾನಮಾನ ಸಿಗುವ ಸಾಧ್ಯತೆ ಇಲ್ಲ. ಯಾವುದೇ ಕಾರಣಕ್ಕೂ ಜೆಡಿಎಸ್ ಆಮಿಷಕ್ಕೆ ಒಳಗಾಗಿ ಪಕ್ಷ ಬಿಡುವ ತೀರ್ಮಾನ ಕೈಗೊಳ್ಳಬೇಡಿ ಎಂದು ಹೇಳಿದ್ದಾರೆ.
ಓದಿ: ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಗೋಹತ್ಯಾ ನಿಷೇಧ ಕಾಯ್ದೆ : ಮಾಜಿ ಸಚಿವ ಮಹಾದೇವಪ್ಪ
ರಾಜಕೀಯವಾಗಿ ಕಾಂಗ್ರೆಸ್ನಲ್ಲಿ ಇದ್ದರೇನೆ ತಮಗೆ ಅನುಕೂಲ. ಪಕ್ಷ ತಮಗೆ ಈ ಹಿಂದೆ ಸಾಕಷ್ಟು ಜವಾಬ್ದಾರಿ ನೀಡಿದೆ, ಮುಂದೆಯೂ ನೀಡಲಿದೆ. ತಮ್ಮ ಅಗತ್ಯ ಪಕ್ಷಕ್ಕೆ ಇದೆ. ತಾವು ಪಕ್ಷದಲ್ಲಿ ಹಿರಿಯರಾಗಿದ್ದು ಮಾರ್ಗದರ್ಶನ ನೀಡಬೇಕಿದೆ. ಈ ಹಿನ್ನೆಲೆ ಸ್ವಲ್ಪ ದಿನ ತಾಳ್ಮೆಯಿಂದ ಕಾಯಿರಿ ಎಂದು ಡಿಕೆಶಿ, ಸಿ ಎಂ ಇಬ್ರಾಹಿಂ ಅವರ ಮನವೊಲಿಸಿದರು.
ಕೆಲ ದಿನಗಳ ಹಿಂದೆ ಸಿ ಎಂ ಇಬ್ರಾಹಿಂ ಭೇಟಿ ಮಾಡಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್‌ಗೆ ಬರುವಂತೆ ಆಹ್ವಾನ ನೀಡಿದ್ದರು. ಯೋಚಿಸುವುದಾಗಿ ಹೇಳಿದ್ದ ಇಬ್ರಾಹಿಂ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಚಿಂತನೆ ನಡೆಸಿದ್ದರು ಎಂಬ ಮಾಹಿತಿ ಇದೆ.
ಹೀಗಾಗಿ ಇಬ್ರಾಹಿಂ ಭೇಟಿ ಮಾಡಿದ ಡಿಕೆಶಿ ಯಾವುದೇ ಕಾರಣಕ್ಕೂ ಪಕ್ಷ ಬಿಡದಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ನಲ್ಲಿ ಮುಂದುವರೆಯುವಂತೆ ಮನವಿ ಮಾಡಿದ್ದಾರೆ.