ಕರ್ನಾಟಕ

karnataka

ETV Bharat / state

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಡಿಕೆಶಿ ಪ್ರಬಲ ಪೈಪೋಟಿ: ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಮೇಲೆ ಪರಮೇಶ್ವರ್ ಕಣ್ಣು - ಕೆಪಿಸಿಸಿ ಅಧ್ಯಕ್ಷ ಗಾದಿಗೆ ಡಿಕೆಶಿ ಪ್ರಬಲ ಪೈಪೋಟಿ

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿ.ಕೆ ಶಿವಕುಮಾರ್ ಇಂದು ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ಎಐಸಿಸಿ ವೀಕ್ಷಕರಾದ ಮಧುಸೂದನ್ ಮಿಸ್ತ್ರಿ ಜೊತೆ ಸುದೀರ್ಘ ಮಾತುಕತೆ ನಡೆಸಿದರು.

D.K shivkumar
ಡಿ.ಕೆ ಶಿವಕುಮಾರ್

By

Published : Dec 19, 2019, 11:42 PM IST

ಬೆಂಗಳೂರು: ಎಐಸಿಸಿ ವೀಕ್ಷಕರಾದ ಮಧುಸೂದನ್ ಮಿಸ್ತ್ರಿ ಅವರನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಚರ್ಚಿಸಿದರು.

ಎಐಸಿಸಿ ವೀಕ್ಷಕರಾದ ಮಧುಸೂದನ್ ಮಿಸ್ತ್ರಿ ಜೊತೆ ಮಾತುಕತೆ ನಡೆಸಿದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ಜೊತೆ ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ಗುರುವಾರ ಸಂಜೆ ಮಧುಸೂದನ್ ಮಿಸ್ತ್ರಿ ಸುದೀರ್ಘ ಮಾತುಕತೆ ನಡೆಸಿದರು. ಮತ್ತೊಬ್ಬ ವೀಕ್ಷಕ ಭಕ್ತ ಚರಣ್ ದಾಸ್ ಕೂಡ ಇದ್ದರು.

ಉಭಯ ನಾಯಕರ ಜೊತೆ ಸಮಾಲೋಚಿಸಿದ ನಂತರ ಹೊರಬಂದ ಡಿಕೆಶಿ ಕೆಲಕಾಲ ಕುಮಾರಕೃಪಾ ಅತಿಥಿ ಗ್ರಹ ಅವರಣದಲ್ಲಿ ತಮ್ಮ ಬೆಂಬಲಿಗರ ಜೊತೆ ಮಾತನಾಡಿಕೊಂಡು ನಿಂತಿದ್ದರು. ಇದೇ ಸಂದರ್ಭ ಎಐಸಿಸಿ ವೀಕ್ಷಕರ ಭೇಟಿಗೆ ಆಗಮಿಸಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಜೊತೆ 45 ನಿಮಿಷಕ್ಕೂ ಹೆಚ್ಚು ಕಾಲ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು.

ಪರಮೇಶ್ವರ್ ಹಾಗೂ ಡಿಕೆಶಿ ನಡುವಿನ ಈ ಮಹತ್ವದ ಸಮಾಲೋಚನೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಪ್ರತಿಪಕ್ಷದ ನಾಯಕ ಇಲ್ಲವೇ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಾ.ಜಿ.ಪರಮೇಶ್ವರ್ ಅತ್ಯಂತ ಮಹತ್ವದ ಸಮಾಲೋಚನೆಯನ್ನು ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಯಾರಿಗೆ ಏನು ಸಾಧ್ಯತೆ?

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ದು, ಇದನ್ನು ಅಂಗೀಕರಿಸಬೇಕು ಬೇಡವೋ ಎಂಬ ಕುರಿತು ರಾಜ್ಯ ಕಾಂಗ್ರೆಸ್ ನಾಯಕರಿಂದ ಮಾಹಿತಿ ಪಡೆಯಲು ಎಂದು ಎಐಸಿಸಿ ವೀಕ್ಷಕರಾದ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್ ಆಗಮಿಸಿದ್ದು, 50ಕ್ಕೂ ಹೆಚ್ಚು ಮುಖಂಡರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಕೆಲ ನಾಯಕರು ರಾಜೀನಾಮೆ ಅಂಗೀಕರಿಸಿ ಬೇಡಿ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಇದೆ. ಒಂದೊಮ್ಮೆ ರಾಜೀನಾಮೆ ಅಂಗೀಕರಿಸುವ ಅನಿವಾರ್ಯ ಎದುರಾದರೆ ದಿನೇಶ್ ಗುಂಡೂರಾವ್ ಅವರ ರಾಜೀನಾಮೆ ಬಗ್ಗೆ ಗಮನಹರಿಸಿ. ಸಿದ್ದರಾಮಯ್ಯ ರಾಜೀನಾಮೆ ಸ್ವೀಕರಿಸುವುದು ಈ ಸಂದರ್ಭದಲ್ಲಿ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಇದೆ.

ಪ್ರಶ್ನಾತೀತ ನಾಯಕ : ದೇಶದಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಸಾಕಷ್ಟು ದುರ್ಬಲವಾಗಿದ್ದು ಈ ಸಂದರ್ಭ ಕಾಂಗ್ರೆಸ್ ಸ್ವಲ್ಪಮಟ್ಟಿನ ಅಸ್ತಿತ್ವ ಉಳಿಸಿಕೊಂಡಿದ್ದರೆ ಅದಕ್ಕೆ ಸಿದ್ದರಾಮಯ್ಯ ಕಾರಣ. ಅವರ ವರ್ಚಸ್ಸಿನಿಂದಲೇ ಪಕ್ಷ ಈ ಸ್ಥಿತಿಯಲ್ಲಿದ್ದು, ಅವರ ಅನುಪಸ್ಥಿತಿ ಪಕ್ಷಕ್ಕೆ ಇನ್ನಷ್ಟು ಆಘಾತ ತರಲಿದೆ. ಇದರಿಂದಾಗಿ ಸಿದ್ದರಾಮಯ್ಯರನ್ನು ಪಕ್ಷದ ಪ್ರಮುಖ ಹುದ್ದೆಯಲ್ಲಿ ಉಳಿದುಕೊಳ್ಳುವುದು ಅನಿವಾರ್ಯ ಎಂಬ ಮಾತು ಹೆಚ್ಚಿನ ನಾಯಕರಿಂದ ಕೇಳಿಬಂದಿದೆ.

ಸಾಧ್ಯತೆಗಳು :ಒಂದೊಮ್ಮೆ ಸಿದ್ದರಾಮಯ್ಯ ಅವರ ರಾಜೀನಾಮೆ ಅಂಗೀಕಾರವಾದರೆ ಅವರು ಸದ್ಯ ನಿಭಾಯಿಸುತ್ತಿರುವ ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಎರಡು ಸ್ಥಾನವನ್ನು ತೆರವುಗೊಳಿಸ ಬೇಕಾಗುತ್ತದೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ದಿನೇಶ್ ಗುಂಡೂರಾವ್ ರಿಂದ ತೆರವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನು ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರವಾದರೆ ತೆರವಾಗುವ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಡಾ.ಜಿ.ಪರಮೇಶ್ವರ್ ಹಾಗೂ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಹೆಚ್.ಕೆ.ಪಾಟೀಲ್ ಆಕಾಂಕ್ಷಿಗಳಾಗಿದ್ದಾರೆ.

ಒಟ್ಟಾರೆ ರಾಜ್ಯ ಕಾಂಗ್ರೆಸ್​​ನಲ್ಲಿ ಬದಲಾವಣೆ ಸನ್ನಿಹಿತವಾಗಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಸಿದ್ದರಾಮಯ್ಯ ವೈಯಕ್ತಿಕ ವರ್ಚಸ್ಸಿನ ಹಿನ್ನೆಲೆ ಅವರ ಸ್ಥಾನ ಭದ್ರವಾದರೂ, ದಿನೇಶ್ ಗುಂಡೂರಾವ್ ಸ್ಥಾನ ಅಭದ್ರವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದರಿಂದ ಮುಂದಿನ ಮೂರು ವರ್ಷದ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ 2023ರ ಚುನಾವಣೆಗೆ ಬಿ ಫಾರಂ ನೀಡುವ ಅಧಿಕಾರವನ್ನು ಪಡೆಯುವ ಜವಾಬ್ದಾರಿಯುತ ಹುದ್ದೆಗೆ ಡಿಕೆ ಶಿವಕುಮಾರ್ ಪ್ರಬಲ ಪೈಪೋಟಿ ನಡೆಸಿದ್ದು, ಪಕ್ಷದ ಹೈಕಮಾಂಡ್ ಒಪ್ಪಿದರೆ ಅಧ್ಯಕ್ಷಗಿರಿಗೆ ಏರುವ ಸಾಧ್ಯತೆ ಹೆಚ್ಚಿದೆ.

ABOUT THE AUTHOR

...view details