ಬೆಂಗಳೂರು:ಸಂಕಷ್ಟಕ್ಕೀಡಾಗುವ ದೇಶದ ಎಲ್ಲಾ ಜನರ ಧ್ವನಿಯಾಗಿ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಟ್ವೀಟ್ ಮೂಲಕ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಡಿಕೆಶಿ, ಕೇಂದ್ರದ ಕೃಷಿ ಮಸೂದೆಗಳಿಂದಾಗಿ ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದು, ಕಾಂಗ್ರೆಸ್ ಪಕ್ಷ ಇವರೆಲ್ಲರ ಧ್ವನಿಯಾಗಿ ನಿಂತಿದೆ. ಇದನ್ನು ರಾಷ್ಟ್ರಪತಿಗಳಿಗೆ ಮುಟ್ಟಿಸಲು ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಸಂಕಲ್ಪ ಮಾಡಿದ್ದಾರೆ. ನೀವೆಲ್ಲಾ ಇದಕ್ಕಾಗಿ ಸಹಿ ಸಂಗ್ರಹಿಸಿ ಕಳುಹಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿಯವರಿಗೆ ನೊಂದವರ ಧ್ವನಿಯನ್ನು ತಲುಪಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನಾವೆಲ್ಲಾ ಸೇರಿ ಇದಕ್ಕೆ ಯಶಸ್ಸನ್ನು ಕಲ್ಪಿಸಬೇಕಿದೆ. ಈ ಹಿನ್ನೆಲೆ ಜನರ ಬಳಿ ಸಹಿ ಸಂಗ್ರಹ ಅಭಿಯಾನದ ರೂಪದಲ್ಲಿ ಕಾಂಗ್ರೆಸ್ ಪಕ್ಷ ಬರುತ್ತದೆ. ಪ್ರತಿ ಬೂತ್, ನಗರ ಮಟ್ಟದಲ್ಲಿ ಅಭಿಯಾನ ನಡೆಯಲಿದೆ. ರೈತರು-ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಹಿ ಮಾಡುವ ಮೂಲಕ ತಮ್ಮ ದುಃಖ ಹಾಗೂ ನೋವಿಗೆ ಸ್ಪಂದಿಸುತ್ತಿರುವ ಕಾಂಗ್ರೆಸ್ಗೆ ಬೆಂಬಲ ನೀಡಬೇಕು ಎಂದು ಕೋರಿದ್ದಾರೆ.
ನೊಂದಿರುವ ಕನಿಷ್ಠ ಐದು ಕೋಟಿ ಮಂದಿಯ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ತಲುಪಿಸುವ ಪ್ರಯತ್ನ ನಡೆದಿದ್ದು, ತಮ್ಮೆಲ್ಲರ ಸಹಕಾರ ಅಗತ್ಯ. ಪಕ್ಷದ ಕಾರ್ಯಕರ್ತರು, ಮುಖಂಡರು, ಸಾಮಾನ್ಯ ನಾಗರಿಕರು ಹಾಗೂ ಎಲ್ಲಾ ವರ್ಗದ ಜನರು ತಮ್ಮ ಸಹಿ ಸಂಗ್ರಹದ ಪ್ರಯತ್ನದಲ್ಲಿ ಪಾಲ್ಗೊಳ್ಳಬೇಕು. ಸಹಿ ಸಂಗ್ರಹ ಕಾರ್ಯ ನಿನ್ನೆಯಿಂದ ಆರಂಭವಾಗಿದ್ದು, ಈ ಒಂದು ಪ್ರಯತ್ನವನ್ನು ಯಶಸ್ವಿ ಮಾಡಿಕೊಡಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.