ರಾಮನಗರ/ ಬೆಂಗಳೂರು: ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್ (ಡಿಕೆ ಶಿವಕುಮಾರ್) ರಾಜ್ಯ ರಾಜಕೀಯದಲ್ಲಿ ತಮ್ಮದೇಯಾದ ವರ್ಚಸ್ಸು ಹೊಂದಿರುವ ಜನ ನಾಯಕ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಆಗಿರುವ ಅವರು, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರು ಹೌದು. ಕಾಂಗ್ರೆಸ್ ಹೈಕಮಾಂಡ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಅವರು, ಮುಖ್ಯಮಂತ್ರಿ ಆಗುವ ಪಟ್ಟಿಯಲ್ಲಿ ಮೊದಲಿಗರು ಕೂಡ ಹೌದು.
ವೈಯಕ್ತಿಯ ಪರಿಚಯ: ಕನಕಪುರ ತಾಲೂಕು ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪುತ್ರರಾಗಿ ಶಿವಕುಮಾರ್ 15 ಮೇ 1962 ರಂದು ಜನಿಸಿದರು. 1993 ರಲ್ಲಿ ಉಷಾ ಎಂಬುವರನ್ನು ವಿವಾಹವಾದ ಶಿವಕುಮಾರ್ ದಂಪತಿಯು, ಐಶ್ವರ್ಯ, ಆಭರಣ ಆಕಾಶ್ ಎಂಬ ಮೂವರು ಮಕ್ಕಳನ್ನು ಹೊಂದಿದ್ದಾರೆ. ಸಹೋದರ ಡಿ. ಕೆ. ಸುರೇಶ್ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸರಾಗಿದ್ದಾರೆ. ಸದ್ಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರಾಗಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರದಿಂದ ಕಣಕ್ಕೆ ಇಳಿದಿದ್ದರು.
ಡಿಕೆಶಿ ರಾಜಕೀಯ ಬೆಳವಣಿಗೆ: 1989ರಲ್ಲಿ ಸಾತನೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಗೆಲ್ಲುವ ಮೂಲಕ ಕ್ಷೇತ್ರದಲ್ಲಿದ್ದ ಜೆಡಿಎಸ್ ಪ್ರಭಾವನ್ನು ಕಡಿಮೆಗೊಳಿಸಿದರು. 1991ರಲ್ಲಿ ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವಲ್ಲಿ ಡಿ.ಕೆ. ಶಿವಕುಮಾರ್ ಮಹತ್ವದ ಪಾತ್ರವಹಿಸಿದ್ದರು. 1994ರಲ್ಲಿ ಡಿಕೆಶಿ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಲಾಗಿತ್ತು. ಆಗ ಅವರು ಪಕ್ಷೇತರರಾಗಿ ಗೆಲುವು ಸಾಧಿಸಿದ್ದರು. ಈ ಮೂಲಕ ಅವರು ಆಗಲೇ ತಮ್ಮ ಸಾಮರ್ಥ್ಯವನ್ನ ತೋರಿಸಿದ್ದಾರೆ. ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ ಖಾತೆ ಹೊಣೆಯನ್ನು ಅವರಿಗೆ ನೀಡಲಾಗಿತ್ತು. 1999ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಆಯ್ಕೆಗೊಂಡ ಅವರು, ಎಸ್. ಎಂ. ಕೃಷ್ಣ ಸಂಪುಟದಲ್ಲಿ ಸಹಕಾರ ಸಚಿವರಾದರು.
2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕನಕಪುರ ಕ್ಷೇತ್ರಕ್ಕೆ ಬಂದರು. 2008, 2013 ಮತ್ತು 2018ರ ಚುನಾವಣೆಯಲ್ಲಿ ಕನಕಪುರದಿಂದ ಸತತ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ. 2013ರ ಸಿದ್ದರಾಮಯ್ಯ ಅವರ ಸಂಪುಟ ಸೇರಿ ಇಂಧನ ಖಾತೆ ವಹಿಸಿಕೊಂಡರು. ಹೆಚ್. ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದರು.
ವಿದ್ಯಾರ್ಥಿಯಿಂದ ರಾಜಕಾರಣಿಯಾದ ಡಿಕೆಶಿ:ಡಿಕೆ ಶಿವಕುಮಾರ್ 1980ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಕ್ರಮೇಣ ಕಾಂಗ್ರೆಸ್ ಪಕ್ಷದ ಶ್ರೇಣಿಯ ಮೂಲಕ ಹುದ್ದೆಗೇರಿದರು. 1989 ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಆಗ ಅವರಿಗೆ ಕೇವಲ 27 ವರ್ಷ. ಕನಕಪುರ ಕ್ಷೇತ್ರ ರಚನೆ ಬಳಿಕ ಸತತ ಗೆದ್ದು ಪ್ರಾಬಲ್ಯ ಸ್ಥಾಪಿಸಿದವರು.