ಬೆಂಗಳೂರು: ನೊಣವಿನಕೆರೆ ಅಜ್ಜಯ್ಯನ ಭೇಟಿಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆರಳಿದರು. ತುಮಕೂರಿನಲ್ಲಿರುವ ಅಜ್ಜಯ್ಯನ ಮಠಕ್ಕೆ ಬೆಂಗಳೂರಿನ ಸದಾಶಿವನಗರ ನಿವಾಸದಿಂದ ಹೊರಟ ಅವರು ಸಂಜೆಯೊಳಗೆ ವಾಪಸಾಗಲಿದ್ದಾರೆ. ಯಾವುದೇ ಕೆಲಸ ಮಾಡುವ ಮುನ್ನ ಅಜ್ಜಯ್ಯನ ಆಶೀರ್ವಾದ ಪಡೆಯುತ್ತೇನೆ ಎಂದು ಡಿಕೆಶಿ ಹಲವು ಬಾರಿ ಹೇಳಿದ್ದು, ಸಂಪ್ರದಾಯ ಮುಂದುವರಿಸಿದ್ದಾರೆ.
ಪಕ್ಷದ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸುವ ಮುನ್ನವೂ ಅಜ್ಜಯ್ಯನ ಫೋಟೋ ಮುಂದೆ ಬಿ ಫಾರಂಗಳನ್ನಿಟ್ಟು ನಮಸ್ಕಾರ ಮಾಡಿದ್ದರು. ಆಗಾಗ್ಗೆ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಬರುವ ಡಿಕೆಶಿ ಅದೇ ರೀತಿ ಇಂದೂ ಸಹ ತೆರಳಿದ್ದಾರೆ. ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯುವುದಕ್ಕೆ ಮುನ್ನ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
ತುಮಕೂರಿಗೆ ಹೋಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಸಂಜೆ ಶಾಸಕಾಂಗ ಪಕ್ಷದ ಸಭೆ ಇದೆ. ಕುತೂಹಲ ಏನೂ ಬೇಡ. ಜನ ನಮ್ಮ ಪರವಾಗಿ ತೀರ್ಪು ಕೊಟ್ಟಿದ್ದಾರೆ. ಎಷ್ಟು ಸ್ಥಾನ ಗೆಲ್ತೀವಿ ಅಂತಾ ಹೇಳಿದ್ದೆನೋ ಅಷ್ಟೇ ಸ್ಥಾನಗಳನ್ನು ಗೆದ್ದಿದ್ದೇವೆ. ಜನರ ಮೇಲೆ ನನಗೆ ಅಷ್ಟು ವಿಶ್ವಾಸವಿತ್ತು" ಎಂದರು.
"ಎಲ್ಲಿ ಶ್ರಮವಿದೆಯೋ ಅಲ್ಲಿ ಪ್ರತಿಫಲ ಇದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ನಾನು ನಂಬಿರುವ ಶಕ್ತಿ, ಮಾರ್ಗದರ್ಶನ ಕೊಟ್ಟ ಹಾಗು ಪ್ರತಿ ಹೆಜ್ಜೆಯಲ್ಲೂ ಧೈರ್ಯ ತುಂಬಿ ನನ್ನನ್ನು ಕಷ್ಟದಲ್ಲಿ ಪಾರು ಮಾಡಿದ ಅಜ್ಜನನ್ನು ಭೇಟಿ ಮಾಡಲು ನೊಣವಿನಕೆರೆಗೆ ಹೋಗುತ್ತಿದ್ದೇನೆ. ಒಂದು ಗಂಟೆಗೆ ವಾಪಸ್ ಬರ್ತೇನೆ" ಎಂದು ತಿಳಿಸಿದರು.
ಇದನ್ನೂ ಓದಿ:ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ: ಸಿಎಂ ಅಭ್ಯರ್ಥಿ ಇಂದೇ ಫೈನಲ್; ನಾಳೆ ಹೊಸ ಸಿಎಂ ಪ್ರಮಾಣ ಸಾಧ್ಯತೆ