ಬೆಂಗಳೂರು :ರಾಜ್ಯ ಸರ್ಕಾರದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಡಿ ಕೆ ಶಿವಕುಮಾರ್ ನೊಣವಿನಕೆರೆ ಅಜ್ಜಯ್ಯನ ಮಠದತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ನಡು ರಸ್ತೆಯಲ್ಲಿಯೇ ಕೆಟ್ಟು ನಿಂತ ಎಸ್ಕಾರ್ಟ್ ವಾಹನ ಕೆಲ ಕಾಲ ಆತಂಕ ಸೃಷ್ಟಿಸಿತ್ತು. ಆದರೆ ಬದಲಿ ವ್ಯವಸ್ಥೆ ಆದ ಬಳಿಕ ಡಿ. ಕೆ ಶಿವಕುಮಾರ್ ಹೆಚ್ಎಲ್ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದರು.
ಇಂದು ಬೆಳಗ್ಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಡಿ. ಕೆ ಶಿವಕುಮಾರ್ ಭಾಗಿಯಾದರು. ಬಳಿಕ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಡಿ.ಕೆ ಶಿವಕುಮಾರ್ ತೆರಳುವ ಸಂದರ್ಭದಲ್ಲಿ ಕೆಪಿಸಿಸಿ ಕಚೇರಿ ಮುಂದೇನೆ ಕೆಟ್ಟು ನಿಂತ ಬೆಂಗಾವಲು ವಾಹನ ಕೆಲಕಾಲ ಕಿರಿಕಿರಿ ಉಂಟು ಮಾಡಿತು. ಡಿ.ಕೆ ಶಿವಕುಮಾರ್ ಕಾರಿನ ಮುಂದೆ ಇರಬೇಕಿದ್ದ ಎಸ್ಕಾರ್ಟ್ ವಾಹನ ಇಂಜಿನ್ನಲ್ಲಿ ಸಮಸ್ಯೆ ಕಾಡಿದ್ದರಿಂದ ಕೊನೆಗೆ ಅದನ್ನು ಅಲ್ಲಿಯೇ ಬಿಟ್ಟು ಬೇರೆ ವಾಹನದೊಂದಿಗೆ ಭದ್ರತಾ ಸಿಬ್ಬಂದಿ ತೆರಳಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 135 ಸ್ಥಾನ ಗಳಿಸಿ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಕನಕಪುರದಿಂದ ಬರೋಬ್ಬರಿ 1.2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೂತನವಾಗಿ ರಚನೆಯಾಗುವ ಸರ್ಕಾರದಲ್ಲಿ ಸಿಎಂ ಆಗಬೇಕೆಂದು ಪ್ರಯತ್ನ ನಡೆಸಿದ್ದರು. ಆದರೆ ಸಿದ್ದರಾಮಯ್ಯ ಅವರಿಂದ ಪೈಪೋಟಿ ಎದುರಾದಾಗ ಸಂಕಷ್ಟ ಪರಿಹಾರಕ್ಕಾಗಿ ಎರಡು ಬಾರಿ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದರು. ದಿಲ್ಲಿ ಮಟ್ಟದಲ್ಲಿ ಸಿಎಂ ಸ್ಥಾನಕ್ಕೆ ಲಾಬಿ ನಡೆದ ಸಂದರ್ಭ ಸಹ ಡಿ ಕೆ ಶಿವಕುಮಾರ್ ಅಜ್ಜಯ್ಯನ ಮಠಕ್ಕೆ ಭೇಟಿ ನೀಡುವುದನ್ನು ಮರೆತಿರಲಿಲ್ಲ. ಚುನಾವಣೆಗೂ ಮುನ್ನ ಬಿ ಫಾರಂ ವಿತರಿಸುವಾಗಲೇ ಅಜ್ಜಯನ ಫೋಟೋ ಮುಂದೆ ಬಿ-ಫಾರಂಗಳನ್ನು ಇಟ್ಟು ಪೂಜಿಸಿ ವಿತರಣೆ ಆರಂಭಿಸಿದ್ದ ಡಿಕೆಶಿ ಪ್ರತಿ ಕೆಲಸಕ್ಕೂ ಅಜ್ಜಯ್ಯನ ಆಶೀರ್ವಾದ ಪಡೆದಿದ್ದರು.
ನಿನ್ನೆ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿಯೂ ಡಿ.ಕೆ ಶಿವಕುಮಾರ್ ಅವರು ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿಯೇ ಪ್ರಮಾಣ ಮಾಡಿ ಅಧಿಕಾರ ವಹಿಸಿಕೊಂಡಿದ್ದರು. ನೂತನವಾಗಿ ರಚನೆಯಾಗಿರುವ ಸರ್ಕಾರದಲ್ಲಿ ಅಧಿಕಾರ ಪಡೆದಿರುವ ಡಿ.ಕೆ ಶಿವಕುಮಾರ್ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಮತ್ತೊಮ್ಮೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಲು ಇಂದು ತೆರಳಿದ್ದಾರೆ. ಮೊದಲು ಅಜ್ಜಯ್ಯನ ದರ್ಶನ ಪಡೆಯಲಿರುವ ಅವರು ಬಳಿಕ ಆದಿಚುಂಚನಗಿರಿ ಮಠಕ್ಕೆ ಭೇಟಿಕೊಡಲಿದ್ದಾರೆ. ಕಾಲಭೈರವೇಶ್ವರನ ದರ್ಶನ ಪಡೆಯಲಿರುವ ಅವರು ಇದಾದ ಬಳಿಕ ನಾಳಿನ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ.