ಬೆಂಗಳೂರು:ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತ ಪದಗ್ರಹಣ ನಡೆಯುವ ಪ್ರತಿಜ್ಞಾ ದಿನ ಕಾರ್ಯಕ್ರಮ ನಾಳೆ ನಡೆಯಲಿರುವ ಹಿನ್ನೆಲೆ ಡಿಕೆ ಶಿವಕುಮಾರ್ ಟೆಂಪಲ್ ರನ್ ಆರಂಭಿಸಿದ್ದಾರೆ.
ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಇಂದು ಸಂಜೆ ಅವರು ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ನಿರ್ಮಲಾನಂದ ಸ್ಪಾಮೀಜಿಗಳ ಆಶೀರ್ವಾದ ಪಡೆದರು. ಇದೇ ಸಂದರ್ಭ ನಾಳಿನ ಪದಗ್ರಹಣ ಸಮಾರಂಭದ ಕುರಿತು ವಿವರಣೆ ನೀಡಿ, ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು. ನಾಳೆ ಬೆಳಿಗ್ಗೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ ನಂತರವೇ ಶಿವಕುಮಾರ್ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಗೆ ಆಗಮಿಸಲಿದ್ದು, ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ ಸದಾಶಿವನಗರ ನಿವಾಸದಿಂದ ಹೊರಡಲಿರುವ ಅವರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಇವರು ನಾಳೆ ಅಧಿಕೃತ ಪದಗ್ರಹಣ ಮಾಡಲಿದ್ದು, ಇವರ ಜೊತೆ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ಕೂಡ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡಿಕೆ ಶಿವಕುಮಾರ್ಗೆ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧಿಕಾರ ಹಸ್ತಾಂತರಿಸಲಿದ್ದಾರೆ.
ಇನ್ನು ಡಿಕೆಶಿ ಹಾಗೂ ಇತರರು ಮಾರ್ಚ್ 11 ರಂದು ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಜವಾಬ್ದಾರಿ ವಹಿಸಿಕೊಂಡಿದ್ದರು. ಕೊರೊನಾ ಹಿನ್ನೆಲೆ ಅಧಿಕಾರದ ಅಧಿಕೃತ ಸ್ವೀಕಾರ ಸಮಾರಂಭ ನಡೆದಿರಲಿಲ್ಲ.