ಕರ್ನಾಟಕ

karnataka

ಆರ್​ ಆರ್ ​ನಗರ ಉಪ ಕದನ: ಗಣ್ಯರ ನಿವಾಸಕ್ಕೆ ತೆರಳಿ ಅಭ್ಯರ್ಥಿ ಕುಸುಮಾ ಪರ ಡಿಕೆಶಿ ಮತಯಾಚನೆ

By

Published : Oct 16, 2020, 5:28 PM IST

ಆರ್​ ಆರ್​ ನಗರ ಉಪ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ಕ್ಷೇತ್ರ ವ್ಯಾಪ್ತಿಯಲ್ಲಿನ ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಿ ತಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ಮತಯಾಚಿಸಿದರು.

DK Shivakumar
ಡಿ.ಕೆ ಶಿವಕುಮಾರ್

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜನಪ್ರಿಯ ವ್ಯಕ್ತಿಗಳ ಮನೆಗೆ ತೆರಳಿ ಸಮಾಲೋಚನೆ ಜೊತೆಗೆ ಮತಯಾಚಿಸುತ್ತಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಮನೆಗೆ ಡಿಕೆಶಿ ಭೇಟಿ

ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜಿತರಾದ ಬಳಿಕ ಎದುರಾಗಿರುವ ಮೊದಲ ಉಪ ಚುನಾವಣೆ ಇದಾಗಿದ್ದು, ತಮ್ಮ ಸೋದರ ಸಂಸದರಾಗಿರುವ ಕ್ಷೇತ್ರ ಹಾಗೂ ಒಕ್ಕಲಿಗ ಸಮುದಾಯದವರು ಅತ್ಯಂತ ಪ್ರಬಲವಾಗಿರುವ ಕ್ಷೇತ್ರದ ಗೆಲುವನ್ನು ಡಿಕೆಶಿ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಶತಾಯಗತಾಯ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ತಮ್ಮ ವೈಯಕ್ತಿಕ ಪ್ರಾಬಲ್ಯವನ್ನು ಕ್ಷೇತ್ರದಲ್ಲಿ ಹೆಚ್ಚಿಸಿಕೊಳ್ಳುವ ಹಾಗೂ ಮುನಿರತ್ನ ವಿರುದ್ಧ ತಮ್ಮ ಬಲ ಪ್ರದರ್ಶಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ 17 ಶಾಸಕರ ಪೈಕಿ ಒಬ್ಬರಾಗಿರುವ ಮುನಿರತ್ನ ಸೋಲು ಕಾಂಗ್ರೆಸ್​ಗೆ ಅತ್ಯಂತ ಅನಿವಾರ್ಯವಾಗಿದೆ. ಜೊತೆಗೆ ಕಾಂಗ್ರೆಸ್ ಅಸ್ತಿತ್ವವನ್ನು ಇನ್ನಷ್ಟು ಬಲಗೊಳಿಸುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆ ಫಲಿತಾಂಶ ದಿಕ್ಸೂಚಿ ಎಂದು ತೋರಿಸುವ ಪ್ರಯತ್ನವನ್ನು ಡಿಕೆಶಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಉಪಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಅವರು ಕ್ಷೇತ್ರ ವ್ಯಾಪ್ತಿಯ ಜನಪ್ರಿಯ ಮತದಾರರನ್ನು ಭೇಟಿ ಮಾಡಿ ಚರ್ಚಿಸಿ ತಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ಮತ ನೀಡುವಂತೆ ಮಾನವಿ ಮಾಡುತ್ತಿದ್ದಾರೆ.

ಇದೇ ನಿಟ್ಟಿನಲ್ಲಿ ಇಂದು ಡಿ.ಕೆ. ಶಿವಕುಮಾರ್ ಅವರು ಚಿತ್ರನಟ ನೆನಪಿರಲಿ ಪ್ರೇಮ್ ಅವರ ನಾಗರಬಾವಿ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಪ್ರೇಮ್ ಅವರ ಪತ್ನಿ ಕೂಡ ಉಪಸ್ಥಿತರಿದ್ದರು. ಇದಾದ ಬಳಿಕ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರ ನಾಗರಬಾವಿ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಒಂದೆಡೆ ಪಕ್ಷದ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮಗೆ ಬಿಡುವು ಸಿಕ್ಕ ಸಂದರ್ಭದಲ್ಲೆಲ್ಲ ಜನಪ್ರಿಯ ವ್ಯಕ್ತಿಗಳ ನಿವಾಸಕ್ಕೆ ತೆರಳಿ ಮತಯಾಚಿಸುವ ಕಾರ್ಯ ಮಾಡುತ್ತಿದ್ದಾರೆ.

ABOUT THE AUTHOR

...view details