ಬೆಂಗಳೂರು: ಎರಡು, ಮೂರು ದಶಕಗಳ ಕಾಲ ಜತೆಗೆ ನಿಂತು ಪಕ್ಷ ಕಟ್ಟಿದವರು, ನಾವೆಲ್ಲ ಒಟ್ಟಾಗಿ ಅನೇಕ ಕೆಲಸಗಳನ್ನು ಕೈಗೊಂಡಿದ್ದೇವೆ. ಬುಧವಾರ ಅವರ ಮನವೊಲಿಸಲು ಕೆಲವರ ಜತೆ ಮುಂಬೈಗೆ ತೆರಳಲಿದ್ದೇನೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಅತೃಪ್ತರ ಮನವೊಲಿಕೆಗೆ ನಾಳೆ ಮುಂಬೈನತ್ತ ಡಿಕೆಶಿ - undefined
ಅತೃಪ್ತ ಶಾಸಕರ ಮನವೊಲಿಸಲು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬುಧವಾರ ಹಲವು ನಾಯಕರು ಮುಂಬೈಗೆ ತೆರಳಲಿದ್ದಾರೆ. ಬಿಜೆಪಿ ನಾಯಕರೇ ಆಪರೇಷನ್ ಕಮಲ ನಡೆಸಿದ್ದಾರೆ ಎಂದು ನೇರವಾಗಿಯೆ ಡಿಕೆಶಿ ಹರಿಹಾಯ್ದರು.
ಇಲ್ಲಿನ ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸೇರಿ ಕೆಲ ನಾಯಕರು ಅತೃಪ್ತರ ಜತೆ ಮಾತುಕತೆ ನಡೆಸಲಿದ್ದಾರೆ. ಬೆಳಿಗ್ಗೆ 9.30ರ ವಿಮಾನದಲ್ಲಿ ಹೊರಡಲಿದ್ದೇವೆ. ಬಿಜೆಪಿ ನಾಯಕರು ನೇರವಾಗಿ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆಪರೇಷನ್ ಕಮಲ ಆರಂಭಿಸಿದ್ದೇ ಬಿಜೆಪಿ ನಾಯಕರು. ಅತೃಪ್ತ ಶಾಸಕರನ್ನು ಮುಂಬೈಯಲ್ಲಿ ಬರಮಾಡಿಕೊಂಡವರು ಯಾರು ಗೊತ್ತಿಲ್ವಾ? ಎಂದು ಬಿಜೆಪಿ ನಾಯಕರನ್ನು ನೇರವಾಗಿಯೇ ಕುಟುಕಿದರು.
ನಾವು ಯಾವ ಬಿಜೆಪಿ ಶಾಸಕರನ್ನು ಸಂಪರ್ಕಿಸಿಲ್ಲ. ಹಾಗೇನಾದರೂ ನಾವು ಸಂಪರ್ಕಿಸಿದ್ದರೆ ಬಿಜೆಪಿ ಶಾಸಕರು ಹೇಳಲಿ. ನನಗೆ 224 ಶಾಸಕರೂ ಗೆಳೆಯರೇ. ಅಭಿವೃದ್ಧಿ ಕೆಲಸಕ್ಕಾಗಿ ಬಿಜೆಪಿ ಶಾಸಕರು ನನ್ನನ್ನು ಭೇಟಿಯಾಗುತ್ತಾರೆ ಎಂದರು.