ಬೆಂಗಳೂರು: ಸರ್ಕಾರದ ವಿರುದ್ಧ ಕೈಗೊಳ್ಳಲು ಉದ್ದೇಶಿಸಿರುವ ಹೋರಾಟದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಸಂಜೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಪಾದಯಾತ್ರೆ ಬಳಿಕ ಮೈಸೂರಿಗೆ ತೆರಳಿ ಕೆಲ ದಿನ ವಿಶ್ರಾಂತಿ ಪಡೆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ರಾತ್ರಿ ಬೆಂಗಳೂರು ನಿವಾಸಕ್ಕೆ ಹಿಂದಿರುಗಿದ್ದಾರೆ. ಸದ್ಯ ಹೈದರಾಬಾದ್ನಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಧ್ಯಾಹ್ನದ ನಂತರ ನಗರಕ್ಕೆ ವಾಪಸಾಗಲಿದ್ದಾರೆ. ಸಂಜೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮೇಕೆದಾಟು ಪಾದಯಾತ್ರೆ ಬಗ್ಗೆ ಚರ್ಚಿಸಲಿದ್ದಾರೆ ಎಂಬ ಮಾಹಿತಿ ಇದೆ.
ಕೋವಿಡ್ ನಿಯಮ ಉಲ್ಲಂಘಿಸಿರುವ ಆರೋಪ ಹೊರಿಸಿ ಕಾಂಗ್ರೆಸ್ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಲು ಮುಂದಾದ ಬಿಜೆಪಿ ಸರ್ಕಾರದ ನಿಲುವು ಖಂಡಿಸಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.
ಓದಿ:NEET: ಒಬಿಸಿಗಳಿಗೆ ಶೇ.27, EWS ಗಳಿಗೆ ಶೇ.10 ರಷ್ಟು ಮೀಸಲಾತಿಗೆ ಸುಪ್ರೀಂ ಕೋರ್ಟ್ ಅಸ್ತು
ಬಿಜೆಪಿ ನಾಯಕರೇ ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುವ ಉದ್ದೇಶದಿಂದ ಸಿಎಂ ಬಸವರಾಜ ಬೊಮ್ಮಾಯ ನಿವಾಸ ಇಲ್ಲವೇ ಗೃಹ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಈ ಸಂಬಂಧ ಇಂದು ಸಿದ್ದರಾಮಯ್ಯ ಜತೆ ಡಿಕೆಶಿ ಚರ್ಚಿಸಲಿದ್ದಾರೆ. ಸರ್ಕಾರದ ವಿರುದ್ಧ ಕಾರ್ಯತಂತ್ರ ರೂಪಿಸಲು ಇದೇ ಸಂದರ್ಭ ಸಮಾಲೋಚಿಸಲಿದ್ದಾರೆ ಎನ್ನಲಾಗಿದೆ.
ಸರ್ಕಾರದ ವಿರುದ್ಧ ಮತ್ತೊಂದು ಸಮರಕ್ಕೆ ಸಜ್ಜಾಗುತ್ತಿರುವ ಕಾಂಗ್ರೆಸ್ ಪಕ್ಷ ಸಿಎಂ ನಿವಾಸ ಇಲ್ಲವೇ ಗೃಹ ಕಚೇರಿ ಮುಂಭಾಗ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ. ಕೊರೊನಾ ಗೈಡ್ಲೈನ್ಸ್ ರೂಲ್ಸ್ ಕಾಂಗ್ರೆಸ್ಗೆ ಮಾತ್ರಾನಾ..?, ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿಯವರ ಮೇಲೆ ಯಾಕೆ ಕೇಸ್ ಹಾಕಿಲ್ಲ..?, ಬಿಜೆಪಿಯವರ ಮೇಲೂ ಕೇಸ್ ಹಾಕಿ ಅಂತಾ ಧರಣಿ ನಡೆಸಲು ತೀರ್ಮಾನ ಕೈಗೊಳ್ಳಲಾಗುತ್ತದೆ.
ಸಿಎಂ ಭೇಟಿ ಮಾಡಲು ಹೋಗೊದು ನೆಂಟಸ್ಥಿಕೆಗೆ ಅಲ್ಲ ಎಂದು ಗುಡುಗಿರುವ ಡಿಕೆಶಿ ಪ್ರತಿಭಟನೆ ನಡೆಸುವ ಸೂಚನೆ ನೀಡಿದ್ದಾರೆ. ನಿನ್ನೆ ಸಹ ನಾನು ಸಿದ್ದರಾಮಯ್ಯ ವಾಪಸ್ ಬರುವುದಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಇದರಿಂದ ಇಂದು ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿ ನಾಳೆ ಪ್ರತಿಭಟನೆಗೆ ರೂಪುರೇಷೆ ಹೆಣೆಯುವ ಸಾಧ್ಯತೆ ಹೆಚ್ಚಿದೆ.