ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿವಿಧ ನಾಯಕರು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಪಕ್ಷ ಸಂಘಟನೆ ಸಂಬಂಧ ಚರ್ಚಿಸಿದರು. ಸದಾಶಿವನಗರದ ಡಿಕೆಶಿ ನಿವಾಸಕ್ಕೆ ಪ್ರತ್ಯೇಕವಾಗಿ ಭೇಟಿ ನೀಡಿದ ವಿವಿಧ ಮುಖಂಡರು ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವ ವಿಚಾರವಾಗಿ ಗಂಭೀರ ಚರ್ಚೆ ನಡೆಸಿದ್ದಾರೆ.
ಮೊದಲು ಭೇಟಿ ಮಾಡಿದ ಶಾಸಕರಾದ ಅಮರೇಗೌಡ ಬಯ್ಯಾಪುರ, ಮಹಂತೇಶ್ ಕೌಜಲಗಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕರಾದ ಗೋವಿಂದಪ್ಪ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ, ಕೊಡಗು ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ನಿವೃತ್ತ ಐ.ಎ.ಎಸ್. ಅಧಿಕಾರಿ ಪುಟ್ಟಸ್ವಾಮಿ ಅವರ ಸಮೂಹ ಹಲವು ಮಹತ್ವದ ವಿಚಾರಗಳ ಕುರಿತು ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದರು.
ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷರು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎಸ್. ಪೊನ್ನಣ್ಣ, ಕೊಡಗು ಡಿಸಿಸಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಅಬ್ದುಲ್ ರೆಹಮಾನ್, ಹಂಸ ಕೊಟ್ಟಮುಡಿ, ಪುಡ್ಡಿ ಗೋಣಿಕೊಪ್ಪ, ಅಶ್ರಫ್ ಕೊಟ್ಟಮುಡಿ ಅವರೊಂದಿಗೆ ಚರ್ಚಿಸಿದ್ದಾರೆ.
ಸದ್ಯವೇ ಡಿ.ಕೆ ಶಿವಕುಮಾರ್ ಮಡಿಕೇರಿ ಭಾಗಕ್ಕೆ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಈ ಸಂದರ್ಭ ಆ ಭಾಗದ ಕಾರ್ಯಕರ್ತರನ್ನು ಒಗ್ಗೂಡಿಸುವ ಹಾಗೂ ಅವರ ಜೊತೆ ಒಂದು ಸಂವಾದ ಕಾರ್ಯಕ್ರಮ ಆಯೋಜಿಸುವ ಸಂಬಂಧ ಚರ್ಚಿಸಿದ್ದಾರೆ.
ಇದನ್ನೂ ಓದಿ: ರಕ್ಷಣಾ ಪಡೆಗಳ ಸೇವೆ ಶ್ಲಾಘನೀಯ, ನಿಮ್ಮ ನೆರವಿಗೆ ಸರ್ಕಾರ ಸದಾ ಸಿದ್ಧ: ಸಿಎಂ ಅಭಯ
ಈ ಭೇಟಿಯ ಬಳಿಕ ಮಧ್ಯಾಹ್ನ ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್, ಶಾಸಕ ರಘುಮೂರ್ತಿ, ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. ಸಿಐಟಿಯು ನಾಯಕಿ ಎಸ್. ವರಲಕ್ಷ್ಮೀ ಸಹ ಇಂದು ಶಿವಕುಮಾರನ ಭೇಟಿಯಾಗಿ ಚರ್ಚಿಸಿದ್ದು, ಸರ್ಕಾರದಿಂದ ಸಿಗಬೇಕಾದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಹೋರಾಟ ನಡೆಸಿದರೂ ಅದು ಫಲ ಕೊಡುತ್ತಿಲ್ಲ. ಇದರಿಂದ ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ನಮ್ಮ ಪರ ದನಿ ಎತ್ತುವಂತೆ ಮನವಿ ಮಾಡಿದರು.