ಕರ್ನಾಟಕ

karnataka

ETV Bharat / state

'ಸತತ ಎರಡು ಬಾರಿ ಗೆಲ್ಲಿಸಿದ ಜನ ಈ ಬಾರಿಯೂ ಕಾಂಗ್ರೆಸ್​ಗೆ ಆಶೀರ್ವಾದ ಮಾಡಲಿದ್ದಾರೆ' - ರಾಜರಾಜೇಶ್ವರಿ ನಗರ ಉಪಚುನಾವಣೆ

'ನಮ್ಮ ಪಕ್ಷವನ್ನು ಬಿಟ್ಟು ಮುನಿರತ್ನ ಎಲ್ಲಿಗೆ ಹೋದರು?, ಯಾಕೆ ಹೋದರು? ಎನ್ನುವುದನ್ನು ನಾನು ಯಾವತ್ತೂ ಪ್ರಶ್ನಿಸಿಲ್ಲ. ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆದು ಈ ಬಾರಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಇಲ್ಲಿನ ಜನ ನಮಗೆ ಮತ್ತೊಮ್ಮೆ ಆಶೀರ್ವಾದ ನೀಡುತ್ತಾರೆ ಎಂಬ ನಂಬಿಕೆ ಇದೆ'- ಡಿ.ಕೆ.ಶಿವಕುಮಾರ್

dk shivakumar talks about rr nagar by election
ಡಿ.ಕೆ.ಶಿವಕುಮಾರ್

By

Published : Oct 14, 2020, 3:39 PM IST

ಬೆಂಗಳೂರು: 'ರಾಜರಾಜೇಶ್ವರಿ ನಗರ ಕ್ಷೇತ್ರದ ಜನ ವಿದ್ಯಾವಂತರಿದ್ದಾರೆ, ಬುದ್ದಿವಂತರಿದ್ದಾರೆ. ಸತತವಾಗಿ ಎರಡು ಬಾರಿ ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸಿದ್ದು, ಈ ಬಾರಿಯೂ ನಮಗೆ ಗೆಲುವು ತಂದುಕೊಡುತ್ತಾರೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭೆ ಉಪಚುನಾವಣೆ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರ ಜೊತೆ ಮಾತನಾಡಿ, 'ನಮ್ಮ ಪಕ್ಷವನ್ನು ಬಿಟ್ಟು ಮುನಿರತ್ನ ಎಲ್ಲಿಗೆ ಹೋದರು?, ಯಾಕೆ ಹೋದರು? ಎನ್ನುವುದನ್ನು ನಾನು ಯಾವತ್ತೂ ಪ್ರಶ್ನಿಸಿಲ್ಲ. ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆದು ಈ ಬಾರಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಇಲ್ಲಿನ ಜನ ನಮಗೆ ಮತ್ತೊಮ್ಮೆ ಆಶೀರ್ವಾದ ನೀಡುತ್ತಾರೆ ಎಂಬ ನಂಬಿಕೆ ಇದೆ' ಎಂದರು.

ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

'ಕ್ಷೇತ್ರ ರಚನೆಯಾದ ಮೇಲೆ ಇಂಥ ಉತ್ತಮ ವಿದ್ಯಾವಂತ ಅಭ್ಯರ್ಥಿ ನಮ್ಮ ಪಕ್ಷಕ್ಕೆ ಸಿಕ್ಕಿರಲಿಲ್ಲ. ಈ ಚುನಾವಣೆಯಿಂದ ಬಿಜೆಪಿ ಸರ್ಕಾರ, ಮೋದಿ ಸರ್ಕಾರ ಬಿದ್ದೋಗತ್ತೆ ಅಂತಲ್ಲ. ಬಿಜೆಪಿ ಸರ್ಕಾರಕ್ಕೆ ಒಂದು ಸಂದೇಶ ರವಾನೆ ಮಾಡಬೇಕಾಗಿದೆ. ಮುನಿರತ್ನಗೆ, ಅಶೋಕ್​ಗೆ ಬಿಜೆಪಿಯವರಿಗೆ ಯಾರನ್ನು ಬೇಕಾದರೂ ಪುಡಿ ಮಾಡೋ ಶಕ್ತಿ ಇದೆ ಬಿಡಿ. ಡಿ.ಜೆ.ಹಳ್ಳಿ ಗಲಭೆ ಪ್ರಕರಣ ವಿಚಾರದಲ್ಲಿ ಕಾಂಗ್ರೆಸ್​ಗೆ ಏನಾದರೂ ಕಳಂಕ ತರಬೇಕು ಅಂತ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ರಿಪೋರ್ಟ್ ರೆಡಿ ಮಾಡಿದ್ದಾರೆ. ಯಾವ ಕಾಂಗ್ರೆಸ್ ಮುಖಂಡರೂ ಇದರಲ್ಲಿ ಭಾಗಿ ಆಗಿಲ್ಲ. ಇದು ಪೊಲೀಸ್ ಇಲಾಖೆಯ ವೈಫಲ್ಯ. ರಾತ್ರೋರಾತ್ರಿ ಪೊಲೀಸರ ಮೇಲೆ ಒತ್ತಡ ತಂದು ಚಾರ್ಜ್‌ಶೀಟ್ ಹಾಕಿಸಿದ್ದಾರೆ' ಎಂದು ದೂರಿದರು.

'ಈ ಬಾರಿ ಜನರ ಆಶೀರ್ವಾದ ಸಿಗಲಿದೆ'- ಸಿದ್ದರಾಮಯ್ಯ

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, 'ಎರಡು ಬಾರಿ ನಾವು ಈ ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಸಂಸದರು, 6 ಕಾರ್ಪೊರೇಟರ್​ಗಳು ಕೂಡ ನಮ್ಮವರೇ. ಮುನಿರತ್ನ ಬಿಜೆಪಿಗೆ ಹೋದ ತಕ್ಷಣ ಮತದಾರರೆಲ್ಲ ಬಿಜೆಪಿಗೆ ಹೋಗಲ್ಲ. ಹಣದಾಸೆಗೆ ಅವರ ಮೇಲೆ‌ ಇದ್ದ ಮೊಕದ್ದಮೆಯಿಂದ ಬಚಾವಾಗೋಕೆ ಮುನಿರತ್ನ ಅಲ್ಲಿಗೆ ಹೋಗಿದ್ದಾರೆ. ನಮ್ಮ ಅಭ್ಯರ್ಥಿ ಅತ್ಯಂತ ಸಮರ್ಥರಾಗಿದ್ದಾರೆ. ಕುಸುಮಾಗೆ ಈ ಕ್ಷೇತ್ರ ಹೊಸದೇನಲ್ಲ. ಈ ಬಾರಿ ಸಮರ್ಥ ವಿದ್ಯಾವಂತ ಅಭ್ಯರ್ಥಿ ನಿಲ್ಲಿಸಿದ್ದೇವೆ. ನಮಗಂತೂ ಕುಸುಮಾಗೆ ಜನ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ' ಎಂದರು.

'ಯೋಗೇಶ್ ಮರ್ಡರ್ ಕೇಸ್​ಗೂ ಪರಮೇಶ್ವರ್​ಗೂ ಏನ್ರೀ ಸಂಬಂಧ?. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣ ನಡೆದಾಗ ನಮ್ಮ ಶಾಸಕರನ್ನು ಕರೆಸಿಕೊಂಡಿದ್ದರು. ಬಸವರಾಜ ಬೊಮ್ಮಾಯಿ ಹೇಳಲಿ ನಮ್ಮ ಶಾಸಕರನ್ನು ಕರೆಸಿಕೊಂಡಿದ್ರಾ, ಇಲ್ವಾ ಅಂತ. ಡಿ.ಜೆ.ಹಳ್ಳಿ ಗಲಭೆಯಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಇದೆ. ನವೀನ್​ನನ್ನು ಅರೆಸ್ಟ್ ಮಾಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಎಫ್​ಐಆರ್ ಹಾಕೋದಕ್ಕೆ ವಿಳಂಬ ಮಾಡಿದ್ದಕ್ಕೆ ಜನ ರೊಚ್ಚಿಗೆದ್ದಿದ್ದರು. ಅದು ತಕ್ಷಣಕ್ಕೆ ನಡೆದಂತ ಘಟನೆ, ಅದಕ್ಕೆ ಬೇರೆ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದಿದ್ದಾರೆ. ನಾನು ಅಹಿಂದ ರಾಮಯ್ಯ ಅಂತ ಕುಮಾರಸ್ವಾಮಿ ಹೇಳಿದ್ದು ಸರಿಯಾಗೇ ಇದೆ. ನಾನು ಅಹಿಂದ ನಾಯಕತ್ವದಿಂದಲೇ ಬಂದವನು. ಅಹಿಂದ ಪರ ಇದ್ದೇನೆ ಅಂತ ಹೇಳಿಕೊಳ್ಳೋಕೆ ಯಾವುದೇ ಮುಜುಗರ ಇಲ್ಲ. ಯಾವ ಉದ್ದೇಶ ಇಟ್ಕೊಂಡು ಅಹಿಂದ ರಾಮಯ್ಯ ಎಂದಿದ್ದಾರೋ ಗೊತ್ತಿಲ್ಲ' ಎಂದು ಹೇಳಿದರು.

ABOUT THE AUTHOR

...view details