ಬೆಂಗಳೂರು :ರಾಜ್ಯದ ಎಲ್ಲ ಪಕ್ಷಗಳು ಸರ್ಕಾರಕ್ಕೆ ಸಹಕಾರ, ಬೆಂಬಲ ನೀಡಿವೆ. ಪ್ರಧಾನಮಂತ್ರಿಗಳು 21 ದಿನಗಳಲ್ಲಿ ಈ ಯುದ್ಧ ಗೆಲ್ಲುತ್ತೇವೆ ಅಂತಾ ಹೇಳಿದ್ದರೂ ನಾವು ಸಹಕಾರ ನೀಡುತ್ತಲೇ ಬಂದಿದ್ದೇವೆ. ಆದರೆ, ಆಡಳಿತಾರೂಢ ಬಿಜೆಪಿಯವರು ವಿವಿಧ ಇಲಾಖೆಗಳು, ಅಕ್ಷಯ ಪಾತ್ರೆಯವರು, ಇನ್ಫೋಸಿಸ್ ಸಂಸ್ಥೆಯವರು ಜನರಿಗೆ ಕೊಟ್ಟ ಆಹಾರ ಕಿಟ್ಗಳ ಮೇಲೆ ತಮ್ಮ ಫೋಟೋ ಹಾಕಿಕೊಂಡು ಹಂಚಿದಿರಲ್ಲಾ..
ಯಾವ ವ್ಯವಸ್ಥೆಯಲ್ಲಿ ಈ ಸರ್ಕಾರ ನಡೆಯುತ್ತಿದೆ. ಆನೇಕಲ್‌ನಲ್ಲಿ ಬಾಣಂತಿಯರು, ಮಕ್ಕಳ ಪೌಷ್ಠಿಕ ಆಹಾರ ಕಿಟ್ ಮೇಲೆ ಬಿಜೆಪಿ ಚಿಹ್ನೆ ಹಾಕಿ ಅಕ್ರಮ ಮಾಡಿದರಲ್ಲ. ಇವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ?. ಇದು ಒಂದು ಸರ್ಕಾರನಾ? ಎಂದು ಕೆಪಿಸಿಸಿ ಅಧ್ಯಕ್ಷ, ಮಾಜಿ ಸಚಿವ ಡಿ ಕೆ ಶಿವಕುಮಾರ್ ಟೀಕಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್.. ವಿಧಾನಸಭೆಯಲ್ಲಿ ಇಂದು ಕೊರೊನಾ ವಿಚಾರವಾಗಿ ನಿಯಮ 69ರ ಅಡಿ ಚರ್ಚೆಯಲ್ಲಿ ಮಾತನಾಡಿದ ಅವರು, ನಾವು ರಾಜಕಾರಣ ಮಾಡಬೇಕು, ಮಾಡೋಣ. ಆದರೆ, ಕೊರೊನಾ ಸಂಕಷ್ಟದ ಸಮಯದಲ್ಲೂ ಬಡವರಿಗೆ ಹಂಚುವ ಆಹಾರದಲ್ಲೂ ರಾಜಕಾರಣ ಮಾಡಬೇಕಿತ್ತಾ? ಬಡವರು ತಿನ್ನುವ ಆಹಾರದಲ್ಲಿ ಪ್ರಚಾರ ಪಡೆದು ಮತ ಕೇಳಬೇಕಾ? ಇದು ನಾಚಿಕೆಗೇಡಿನ ವಿಚಾರ. ವಿರೋಧ ಪಕ್ಷದವರು ಅಕ್ರಮದ ಬಗ್ಗೆ ಆರೋಪ ಮಾಡಿದಾಗ ನೀವು ಕ್ರಮ ಜರುಗಿಸಲಿಲ್ಲ ಎಂದ್ರೆ, ಈ ಅಕ್ರಮದಲ್ಲಿ ನೀವೂ ಭಾಗಿಯಾಗಿದ್ದೀರಿ ಎಂಬುದನ್ನು ತೋರಿಸುತ್ತದೆ ಎಂದು ದೂರಿದರು.
ಎಷ್ಟು ರೈತರಿಗೆ ನೆರವಾಗಿದ್ದೀರಿ? :ಹೂವು, ತರಕಾರಿ, ಹಣ್ಣು ಬೆಳೆದ ರೈತರಿಗೆ ಮಾರುಕಟ್ಟೆ ಕಲ್ಪಿಸಿದ್ದೇವೆ ಎಂದು ಹೇಳಿದ್ದೀರಿ, ಎಷ್ಟು ರೈತರ ಬೆಳೆ ಖರೀದಿ ಮಾಡಿದ್ದೀರಿ, ಎಷ್ಟು ರೈತರಿಗೆ ಮಾರುಕಟ್ಟೆ ಕಲ್ಪಿಸಿದ್ದೀರಿ, ಎಷ್ಟು ರೈತರಿಗೆ ಪರಿಹಾರ ಕಲ್ಪಿಸಿಕೊಟ್ಟಿದ್ದೀರಿ? ಕೃಷಿ ಸಚಿವರು ಉತ್ತರ ನೀಡಲಿ. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಲು ಬಿಡಲ್ಲ ಅಂತಾ ಯಡಿಯೂರಪ್ಪನವರು ಹೇಳಿಕೆ ನೀಡಿದರು. ಆದೇಶ ಹೊರಡಿಸಿದರು. ಆದರೆ, ಎಷ್ಚು ಅಧಿಕಾರಿಗಳು ಹೋಗಿ ಬೆಳೆ ನಷ್ಟದ ಸಮೀಕ್ಷೆ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ :ಈ ಸರ್ಕಾರ ರೈತರು, ಕಾರ್ಮಿಕರನ್ನು ರಕ್ಷಿಸುವಲ್ಲೂ ವಿಫಲವಾಯಿತು. ಕಾರ್ಮಿಕರಿಗೆ ಮೂರು ಪಟ್ಟು ಬಸ್ ದರ ಏರಿಕೆ ವಿರುದ್ಧ ನಾವು ಹೋರಾಟ ಮಾಡಿದ ಮೇಲೆ ದೊಡ್ಡ ಮನಸ್ಸು ಮಾಡಿ ಅವರಿಗೆ ಐದು ದಿನಗಳ ಕಾಲ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಯಿತು. ಸಚಿವ ಅಶೋಕ್ ಅವರು ತಮ್ಮ ಆತ್ಮ ಸಂತೋಷಕ್ಕಾಗಿ ನನ್ನ ಚೆಕ್‌ನ ಭೋಗಸ್ ಎಂದರು. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಏನು? ಈ ಕಠಿಣ ಸಮಯದಲ್ಲಿ ನಮ್ಮ ಹೃದಯ ಜನರಿಗಾಗಿ ಮಿಡಿಯುತ್ತಿದೆ. ಸರ್ಕಾರದ ಬೇಜವಾಬ್ದಾರಿಯಿಂದ ಈ ಕಾಯಿಲೆ ಹರಡಿದೆ. ಹೊರ ದೇಶದಿಂದ ಬರುವವರನ್ನು ಮುಂಚಿತವಾಗಿಯೇ ತಡೆದಿದ್ದರೆ, ಇವತ್ತು ಇಷ್ಟು ತೊಂದರೆ ಆಗುತಿತ್ತಾ? ನಿಮ್ಮ ಬೇಜವಾಬ್ದಾರಿತನಕ್ಕೆ ಇಡೀ ದೇಶ ನರಳುವಂತಾಗಿದೆ ಎಂದರು.
ಈ ಸಮಯದಲ್ಲಿ ಎಲ್ಲ ಪಕ್ಷಗಳು ಸರ್ಕಾರಕ್ಕೆ ಬೆಂಬಲವಾಗಿ ನಿಂತವು. ಸಂಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ ಮಾಡಬೇಕು ಅಂತಾ ನಾವು ಮನವಿ ಮಾಡಿದೆವು. ಸರ್ಕಾರವೂ ಒಂದಷ್ಟು ಘೋಷಣೆ ಮಾಡಿತು. ಯಡಿಯೂರಪ್ಪನವರು 1,610 ಕೋಟಿ ರೂ. ಪ್ಯಾಕೇಜ್ ಘೋಷಿಸಿದರು. ಚಾಲಕರಿಗೆ, ನೇಕಾರರಿಗೆ, ಮಡಿವಾಳರಿಗೆ ಹಾಗೂ ಇತರೆ ವರ್ಗದವರಿಗೆ ಪ್ರತಿ ತಿಂಗಳು ₹10 ಸಾವಿರ ಕೊಟ್ಟು ಸಹಾಯ ಮಾಡಿ ಅಂತಾ ಮನವಿ ಮಾಡಿದೆವು. ಆದರೆ, ಮುಖ್ಯಮಂತ್ರಿಗಳು ಚಾಲಕರಿಗೆ 5 ಸಾವಿರ, ನೇಕಾರರಿಗೆ 2 ಸಾವಿರ, ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ಘೋಷಣೆ ಮಾಡಿದರು.
ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್ ಎಷ್ಟು ಜನಕ್ಕೆ ತಲುಪಿದೆ? ಈ ಬಗ್ಗೆ ಮಾಹಿತಿ ಪಡೆಯೋಣ ಎಂದರೆ ಕಾರ್ಮಿಕ ಸಚಿವರು ಇಲ್ಲಿ ಇಲ್ಲ. ಇವತ್ತಿನವರೆಗೂ ಶೇ.10-20ರಷ್ಟು ಜನರಿಗೆ ಈ ಪರಿಹಾರ ಹಣ ತಲುಪಿಲ್ಲ. ಹಳ್ಳಿಯಲ್ಲಿರುವ ಕ್ಷೌರಿಕನಾಗಲಿ, ಚಾಲಕನಾಗಲಿ ಮೋಸ ಮಾಡಲು ಸಾಧ್ಯವಾ? ಸರ್ಕಾರ ತನ್ನ ಸಿಬ್ಬಂದಿ ಬಳಸಿಕೊಂಡು ಸಮೀಕ್ಷೆ ಮಾಡಿ ಅವರಿಗೆ ಸ್ಥಳದಲ್ಲೇ ಪರಿಹಾರ ಚೆಕ್ ನೀಡಿ ಫೋಟೋ ತೆಗೆದುಕೊಳ್ಳಲು ಏಕೆ ಸಾಧ್ಯವಾಗಲಿಲ್ಲ? ಎಂದು ತರಾಟೆಗೆ ತೆಗೆದುಕೊಂಡರು.
ಸರ್ಕಾರ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದ್ದರೆ, ಕಾರ್ಮಿಕರು ಯಾಕೆ ತಮ್ಮ ಊರಿಗೆ ವಾಪಸ್ ತೆರಳುತ್ತಿದ್ದರು. ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವವರು ಕೇವಲ ಕಾರ್ಮಿಕರಲ್ಲ ಸ್ವಾಮಿ, ಅವರು ಈ ದೇಶ ನಿರ್ಮಾಣ ಮಾಡುತ್ತಿರುವವರು. ಇಂದು ನಾವು ಚೆನ್ನಾಗಿ ಕಾಣುತ್ತಿದ್ದೇವೆ, ಒಳ್ಳೆಯ ಬಟ್ಟೆ ಹಾಕಿಕೊಳ್ಳುತ್ತಿದ್ದೇವೆ ಎಂದರೆ ಅದಕ್ಕೆ ಅವರೇ ಕಾರಣ. ಅವರನ್ನು ನಾವು ಎಷ್ಟು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು, ಅವರ ಕಷ್ಟಕ್ಕೆ ಸ್ಪಂದಿಸಿ 24 ರಿಂದ 48 ಗಂಟೆಗಳಲ್ಲಿ ಅವರಿಗೆ ಪರಿಹಾರ ತಲುಪುವಂತೆ ಮಾಡಬೇಕಿತ್ತು.
ಆದರೆ, ಇವತ್ತಿನವರೆಗೂ ಅದು ಸಾಧ್ಯವಾಗಿಲ್ಲ. ಈ ಸರ್ಕಾರಕ್ಕೆ ಕೊನೇ ಪಕ್ಷ ವೃದ್ಧರಿಗೆ, ವಿಧವೆಯರಿಗೆ, ವಿಶೇಷಚೇತನರಿಗೆ ಪಿಂಚಣಿ ನೀಡಲು ಸಾಧ್ಯವಾಗಿಲ್ಲ. ಅದನ್ನು ನೀಡಲು ಈಗ ಕೆ1, ಕೆ2 ಅಂತಾ ಏನೇನೋ ವಿಂಗಡಣೆ ಮಾಡಿದ್ದಾರೆ. 20, 30 ವರ್ಷಗಳಿಂದ 500, 1000 ರೂಪಾಯಿ ಕೊಡಲಾಗುತ್ತಿದೆ. ಇದನ್ನು ನೀಡುವುದರಲ್ಲೂ ರಾಜಕೀಯ ಮಾಡಬೇಕಾ? ಎಂದು ಪ್ರಶ್ನಿಸಿದರು. ಕೊರೊನಾದಂತಹ ಕಠಿಣ ಪರಿಸ್ಥಿತಿಯಲ್ಲಿ ಜನರ ಕಷ್ಟಗಳಿಗೆ ನಮ್ಮ ಹೃದಯ ಮಿಡಿಯಬೇಕಿತ್ತು. ಆದರೆ, ರಾಜ್ಯ ಸರ್ಕಾರ ರೈತರು, ಬಡವರು, ಕಾರ್ಮಿಕರ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಂಡಿದ್ದು, ರಾಜ್ಯದ ಜನ ಇವರನ್ನು ಕ್ಷಮಿಸುವುದಿಲ್ಲ ಎಂದು ಶಿವಕುಮಾರ್ ಹರಿಹಾಯ್ದರು.
ನಾವು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ :ಸಚಿವ ಸುಧಾಕರ್ ಅವರು ಒಂದು ಕಡೆ ಹೇಳಿಕೆ ನೀಡುತ್ತಾರೆ. ನಾವು ಕಾಂಗ್ರೆಸ್ ಸರ್ಕಾರದ ಅಕ್ರಮ ಬಿಚ್ಚಿಡುತ್ತೇವೆ ಎಂದು. ಅವರು ಕೇವಲ ಬಿಚ್ಚಿಡುವುದಲ್ಲ, ಹರಿದು ಹಾಕಲಿ. ನಾವು ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದ್ದರೆ ಯಾವುದೇ ತನಿಖೆ ಬೇಕಾದರೂ ನಡೆಸಿ ಸಾಬೀತುಪಡಿಸಲಿ, ಶಿಕ್ಷೆ ಅನುಭವಿಸಲು ನಾವು ಸಿದ್ಧ. ಬೇಕಾದ್ರೆ ನೇಣಿಗೆ ಏರಿಸಿ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ. ತಪ್ಪು ಸಿದ್ದರಾಮಯ್ಯನವರೇ ಮಾಡಿರಲಿ, ಡಿ ಕೆ ಶಿವಕುಮಾರೇ ಮಾಡಿರಲಿ, ಹೆಚ್ ಕೆ ಪಾಟೀಲ್ರೇ ಮಾಡಿರಲಿ. ನಾವೇನು ದೇವ ಲೋಕದಿಂದ ಇಳಿದು ಬಂದಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಬೇಕು, ಅನುಭವಿಸಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.
ಈ ಸರ್ಕಾರ ಏನು ಮಾಡುತ್ತಿದೆ. ಬಡವರು ತಿನ್ನುವ ಅನ್ನದಲ್ಲಿ ಅಕ್ರಮ ಮಾಡುತ್ತಿದೆ. ಹೆಣದ ಮೇಲೆ ಹಣ ಮಾಡಲು ಹೊರಟಿರುವುದು ಒಂದು ಸರ್ಕಾರವೇ? ಈ ಸರ್ಕಾರದ ಅಕ್ರಮವನ್ನು ನಾವು ನೋಡಿಕೊಂಡು ಸುಮ್ಮನಿರಬೇಕಾ? ಎಷ್ಟು ದಿನ ನಾವು ತಾಳ್ಮೆಯಿಂದ ಇರಬೇಕು. ಮಾಧ್ಯಮಗಳು ಪ್ರತಿ ವಿಚಾರವನ್ನು ಪ್ರಕಟಿಸಿವೆ. ಕೊರೊನಾದಿಂದ ಸತ್ತವರ ಹೆಣಕ್ಕೆ ಒಂದು ಒಳ್ಳೆಯ ಅಂತ್ಯ ಸಂಸ್ಕಾರ ಮಾಡಲು ನಿಮ್ಮಿಂದ ಸಾಧ್ಯವಾಗಲಿಲ್ಲ. ಇದು ಯಾವ ಸಂಸ್ಕೃತಿ? ಬಳ್ಳಾರಿಯಲ್ಲಿ ಹೆಣಗಳನ್ನು ಗುಂಡಿಗೆ ಸುರಿದರಲ್ಲಾ, ಯಾರ ಮೇಲೆ ಕ್ರಮ ತೆಗೆದುಕೊಂಡಿದ್ದೀರಿ? ಇದೇನಾ ಈ ದೇಶದ ಸಂಸ್ಕೃತಿ.
ನಮ್ಮ ಸಂಸ್ಕೃತಿ ನಮ್ಮ ಆಸ್ತಿ. ಇಡೀ ವಿಶ್ವ ನಮ್ಮತ್ತ ನೋಡುತ್ತಿದೆ. ಇದನ್ನು ನೋಡಿಕೊಂಡು ಇರಬೇಕಾ? ನನ್ನ ತಮ್ಮ ಪಿಪಿಇ ಕಿಟ್ ಹಾಕಿಕೊಂಡು ಹೆಣಕ್ಕೆ ಅಂತ್ಯ ಸಂಸ್ಕಾರ ಮಾಡಲು ಹೋಗಿದ್ದ. ಅದಾದ ಮೇಲೆ ಒಂದಿಬ್ಬರು ನಾಯಕರು ಹೋದರು. ಪರಿಸ್ಥಿತಿ ಕೈ ಮೀರಿದ ನಂತರ ಆಸ್ಪತ್ರೆಗಳ ಬಗ್ಗೆ ಸರ್ಕಾರ ಮಾತನಾಡುತ್ತಿದೆ. ನಾವು ಆರಂಭದಲ್ಲೇ ಹೇಳಿರಲಿಲ್ಲವಾ? ವೈದ್ಯಕೀಯ ಕಾಲೇಜುಗಳನ್ನು ಕರೆದು ಸಭೆ ನಡೆಸಿ, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಿ ಎಂದು ಸಲಹೆ ನೀಡಿರಲಿಲ್ಲವೇ? ಹೀಗೆ ಸರ್ಕಾರ ಪ್ರತಿ ಹಂತದಲ್ಲೂ ವಿಫಲವಾಗಿದೆ ಎಂದು ದೂರಿದರು.
ಅಕ್ಕಿ ಅಕ್ರಮ ದಾಸ್ತಾನು, ಆಹಾರ ಕಿಟ್ ದುರ್ಬಳಕೆ ಕುರಿತು ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಈ ವಿಚಾರಗಳ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೋಟಿಸ್ ಕೊಡುತ್ತಾರಂತೆ. ಆ ರವಿಕುಮಾರ್ ನೋಟಿಸ್ ನೀಡುವುದಲ್ಲ, ರಾಜ್ಯದ ಮುಖ್ಯಕಾರ್ಯದರ್ಶಿಗಳು ನನಗೆ ನೋಟಿಸ್ ನೀಡಲಿ. ನಾವು ಅದನ್ನು ಎದುರಿಸಲು ಸಿದ್ಧ. ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ನೋಟಿಸ್, ಕೇಸುಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ. ಹಾಸಿಗೆ, ದಿಂಬು, ಮತ್ತಿತರ ಪರಿಕರಗಳ ಖರೀದಿಯಲ್ಲಿನ ಕೋಟಿ, ಕೋಟಿ ಲೂಟಿ ವಿಚಾರದಲ್ಲಿ ನ್ಯಾಯಾಂಗ ತನಿಖೆ ನಡೆಸಲಿ ಎಂದು ಸಿದ್ದರಾಮಯ್ಯನವರ ಒತ್ತಾಯಕ್ಕೆ ಡಿಕೆಶಿ ಧ್ವನಿಗೂಡಿಸಿದರು.