ಬೆಂಗಳೂರು:ಇಡೀ ವಿಶ್ವವೇ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಗೌರವಾನ್ವಿತ ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ಅಚ್ಚರಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈಜುಕೊಳದಲ್ಲಿ ಡಾ. ಸುಧಾಕರ್ - ರಾಜೀನಾಮೆಗೆ ಕಾಂಗ್ರೆಸ್ ಪಟ್ಟು - D.K Shivakumar talking aganist sudhakar post
ಸಚಿವ ಡಾ.ಸುಧಾಕರ್ ಲಾಕ್ಡೌನ್ ವೇಳೆಯಲ್ಲಿ ತಮ್ಮ ಮಕ್ಕಳೊಂದಿಗೆ ಸ್ವಿಮಿಂಗ್ ಪೂಲ್ನಲ್ಲಿ ಎಂಜಾಯ್ ಮಾಡುತ್ತಿರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಕೊರೊನಾ ವಿರುದ್ಧ ಹೋರಾಡಲು ಸರ್ಕಾರ ಎಲ್ಲ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು, ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಿ ಜನರನ್ನು ಮನೆಯೊಳಗಿರುವಂತೆ ಸೂಚಿಸಲಾಗಿದೆ. ಖಾಸಗಿ ಈಜುಕೊಳ ಮುಚ್ಚಿಸಲಾಗಿದೆ. ದೊಡ್ಡ ದೊಡ್ಡವರ ವೈಯಕ್ತಿಕ ಜೆಟ್, ವಿಮಾನಗಳ ಹಾರಾಟ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಕೊರೊನಾ ಜವಾಬ್ದಾರಿಯನ್ನು ಸರ್ಕಾರ ನೀಡಿದೆ. ಆದರೆ ಈ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಸ್ವತಃ ವೈದ್ಯರಾಗಿ, ಪ್ರಜ್ಞಾವಂತ ಎನಿಸಿಕೊಂಡಿರುವವರು ಈ ಹೊತ್ತಲ್ಲಿ ಜನರಿಗೆ ತಮ್ಮ ವೈಯಕ್ತಿಕ ಜೀವನದ ಮೋಜಿನ ಚಿತ್ರವನ್ನು ಹಾಕಿಕೊಂಡಿರುವುದು ಆಘಾತ ತಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಈ ವಿಚಾರವಾಗಿ ನಾನು ರಾಜಕೀಯ ಮಾಡಲು ಹೋಗುವುದಿಲ್ಲ. ಇದು ನೈತಿಕ ಮೌಲ್ಯದ ವಿಚಾರವಾಗಿದೆ. ನಮ್ಮ ಪಕ್ಷದವರು, ಬೇರೆ ಪಕ್ಷದವರು ಮಾತ್ರವಲ್ಲ, ಬಿಜೆಪಿ ನಾಯಕರೇ ನನಗೆ ಕರೆ ಮಾಡಿ ವಿರೋಧ ಪಕ್ಷದವರು ಈವರೆಗೂ ಯಾಕೆ ಸುಧಾಕರ್ ಅವರ ರಾಜೀನಾಮೆ ಕೇಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಆದರೂ ನಾನು ಈ ಸಂದರ್ಭದಲ್ಲಿ ರಾಜೀನಾಮೆಗೆ ಆಗ್ರಹಿಸುವುದಿಲ್ಲ ಎಂದಿದ್ದಾರೆ.