ಕರ್ನಾಟಕ

karnataka

ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಡಿಕೆಶಿ ಬೆಂ'ಬಲ'

By

Published : Jul 28, 2020, 9:51 PM IST

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

DK shivakumar supports tomorrow's protest of Asha activists
ನಾಳಿನ ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಡಿಕೆಶಿ ಬೆಂ'ಬಲ'

ಬೆಂಗಳೂರು: ಮಾಸಿಕ 12 ಸಾವಿರ ರೂಪಾಯಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಕಾರ್ಯಕ್ರಮ ಹಾಕಿಕೊಂಡಿರುವ ಆಶಾ ಕಾರ್ಯಕರ್ತೆಯರಿಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಪೋರ್ಟ್ ಮಾಡಿದ್ದಾರೆ.

ಸರ್ಕಾರ ತಕ್ಷಣವೇ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಆರಂಭದ ಸಮಯದಲ್ಲಿ ನನ್ನ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ನಾನು ಕೂಡ ನೆಲಮಂಗಲದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿ, ಅಹವಾಲು ಆಲಿಸಿದೆ. ನಂತರ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಕೂಡಲೇ ಅವರ ಬೇಡಿಕೆ ಈಡೇರಿಸಿ ಎಂದು ಆಗ್ರಹಿಸಿದ್ದೆ. ಆದರೂ ಸರ್ಕಾರ ಇವರ ಬಗ್ಗೆ ಅಸಡ್ಡೆ ತೋರಿರುವುದು ಅಕ್ಷಮ್ಯ ಎಂದು ಅವರು ಹೇಳಿದ್ದಾರೆ.

ಆಶಾ ಕಾರ್ಯಕರ್ತೆಯರ ಬೇಡಿಕೆ ನ್ಯಾಯಯುತವಾಗಿದ್ದು, ಅವರಿಗೆ ಸುರಕ್ಷಾ ಸಾಧನಗಳನ್ನು ಒದಗಿಸಬೇಕು. ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆ ತಿರುಗಿ ಎರಡೇರಡು ಬಾರಿ ಸಮೀಕ್ಷೆ ನಡೆಸಿದ್ದಾರೆ. ಅವರು ತಮ್ಮ ಪ್ರಾಮಾಣಿಕ ಕೆಲಸಕ್ಕೆ ತಕ್ಕ ಬೇಡಿಕೆಗಳನ್ನು ಕೇಳುತ್ತಿದ್ದು ಸರ್ಕಾರ ಈ ರೀತಿ ವರ್ತಿಸುತ್ತಿರುವುದು ಸರಿಯಲ್ಲ ಎಂದರು.

ಸರ್ಕಾರ ಆಶಾ ಕಾರ್ಯಕರ್ತರಿಗೆ 3 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಘೋಷಣೆ ಮಾಡಿತ್ತು. ಘೋಷಣೆ ಮಾಡಿ ಮೂರು ತಿಂಗಳಾದರೂ ಶೇ.10ರಷ್ಟು ಜನರಿಗೆ ಹಣ ತಲುಪಿಲ್ಲ. ಅವರ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡಲು ಹೊರಟಿದೆ. ಆಶಾ ಕಾರ್ಯಕರ್ತೆಯರು ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದು, ಅವರಿಗೆ ವಿಮೆ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ಅವರು ಕೇಳುತ್ತಿರುವ ಮಾಸಿಕ 12 ಸಾವಿರ ರೂಪಾಯಿ ವೇತನ ನೀಡಬೇಕು, ಈಗ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುತ್ತಿರುವ ಗೌರವ ಧನವನ್ನು ಏಕಕಾಲಕ್ಕೆ ನೀಡಬೇಕು. ಹಲವು ತಿಂಗಳುಗಳಿಂದ ಇರುವ ಬಾಕಿ ಹಣ ಕೂಡಲೇ ನೀಡಬೇಕು ಎಂದರು.

ಕಳೆದ 19 ದಿನಗಳಿಂದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಮುಖ್ಯಮಂತ್ರಿಗಳಾಗಲಿ, ಸಂಪುಟ ಸಚಿವರುಗಳಾಗಲಿ ಅವರ ಸಮಸ್ಯೆ ಏನು ಎಂದು ಕೇಳುವ ಪ್ರಯತ್ನ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಿಳಿಸಿದ್ದಾರೆ.

ABOUT THE AUTHOR

...view details