ಬೆಂಗಳೂರು : ಇಡಿ ಅವರಿಗೆ ನಾನು ಎಲ್ಲ ಉತ್ತರ ನೀಡಿದ್ದೆ. ಆದರೆ ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖಾಧಿಕಾರಿ ಬದಲಾಗಿದ್ದಾರೆ ಎಂಬ ಕಾರಣದಿಂದ ನ. 7 ರಂದು ವಿಚಾರಣೆಗೆ ಹಾಜರಾಗುವಂತೆ ನನಗೆ ಹಾಗೂ ನನ್ನ ಸಹೋದರನಿಗೆ ನೊಟೀಸ್ ನೀಡಿದ್ದಾರೆ. ಅವರು ಕೆಲವು ದಾಖಲೆ ಕೇಳಿದ್ದು ಅವುಗಳನ್ನು ಸಲ್ಲಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಇಡಿ ಸಮನ್ಸ್ ವಿಚಾರವಾಗಿ ಮಾತನಾಡಿ, ಇನ್ನು ಕೆಲವು ದಾಖಲೆ ಕಳುಹಿಸಬೇಕು. ಮುಂದಿನ ದಿನಗಳಲ್ಲಿ ಕಳಿಸುತ್ತೇನೆ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಬಿಐ ಹಾಗೂ ಇಡಿ ಪ್ರಕರಣ ದಾಖಲಿಸಿದ್ದು, ಈ ರೀತಿ ದಾಖಲಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ಗೆ ಅರ್ಜಿ ಹಾಕಿದ್ದೇನೆ. ಕಾನೂನು ಮೇಲೆ ಗೌರವ ಇದೆ. ಅವರು ಏನು ಹೇಳುತ್ತಾರೋ ನೋಡೋಣ. ಪದೇ ಪದೇ ನಮಗೆ ಯಾಕೆ ನೊಟೀಸ್ ನೀಡಿ ಹಿಂಸೆ ನೀಡುತ್ತಿದ್ದಾರೋ ಗೊತ್ತಿಲ್ಲ ಎಂದರು.
ಪಾವಗಡ ಸೋಲಾರ್ ಪಾರ್ಕ್ ಯೋಜನೆ ಮೆಚ್ಚಿ ಕೇಂದ್ರ ಸರ್ಕಾರ ಪ್ರಶಸ್ತಿ: ಪಾವಗಡ ಸೋಲಾರ್ ಪಾರ್ಕ್ ಯೋಜನೆಯಲ್ಲಿನ ರೈತಪರ ನೀತಿಯನ್ನು ಕೇಂದ್ರ ಸರ್ಕಾರ ಮೆಚ್ಚಿ ಪ್ರಶಸ್ತಿ ನೀಡಿದೆ. ಇದನ್ನು ಕರ್ನಾಟಕ ಮಾಡೆಲ್ ಎಂದೂ ಬಣ್ಣಿಸಿ, ಇತರ ರಾಜ್ಯಗಳಿಗೂ ಇದನ್ನು ಅನುಸರಿಸುವಂತೆ ಹೇಳಿತ್ತು. ಈಗ ರಾಜ್ಯ ಸರ್ಕಾರ ಈ ಯೋಜನೆ ಬಗ್ಗೆ ಯಾವುದೇ ತನಿಖೆ ನಡೆಸಿದರೂ ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಸೋಲಾರ್ ಪಾರ್ಕ್ ಯೋಜನೆಯಲ್ಲಿ ಅಕ್ರಮ ನಡೆದಿದೆ, ಇದರ ತನಿಖೆ ಮಾಡುತ್ತೇವೆ ಎನ್ನುವ ರಾಜ್ಯ ಸರ್ಕಾರವು ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಈ ಯೋಜನೆ ಪ್ರಸ್ತಾಪಿಸಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು, 'ಚರಿತ್ರೆ ಯಾರೂ ಬದಲಿಸಲು ಸಾಧ್ಯವಿಲ್ಲ.
ನಾನು ಯಾವ ಯೋಜನೆ ಮಾಡಿದ್ದೇನೆ, ಎಷ್ಟು ಪಾರದರ್ಶಕವಾಗಿ ಮಾಡಿದ್ದೇನೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿದಿದೆ. ಸೋಲಾರ್ ಪಾರ್ಕ್ ಯೋಜನೆಯಲ್ಲಿ ಬಳಕೆಯಾದ ಜಮೀನು ರೈತರ ಬಳಿಯೇ ಉಳಿದುಕೊಂಡು, ರೈತರೇ 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವಂತಾಗಿದೆ ಎಂದು ಹೇಳಿದರು.
ಸಣ್ಣ ತಪ್ಪು ಮಾಡಿದ್ದರೂ ಶಿಕ್ಷೆಗೆ ಬದ್ಧ :ಇನ್ನು ಈ ಯೋಜನೆಗೆ 6 ತಿಂಗಳ ಮುಂಚಿತವಾಗಿ ಜಾಹೀರಾತು ನೀಡಿ ಟೆಂಡರ್ ಕರೆಯಲಾಗಿತ್ತು. ಇದೆಲ್ಲವನ್ನೂ ರಾಜ್ಯದ ಅಧಿಕಾರಿಗಳು ಮಾಡಿದ್ದರು. ಈಗಿನ ಇಲಾಖೆ ಕಾರ್ಯದರ್ಶಿಗಳು, ಸರ್ಕಾರ ಯಾರನ್ನೂ ಕೆಆರ್ ಸಿ ಮುಖ್ಯಸ್ಥರನ್ನಾಗಿ ಮಾಡಿದೆಯೋ ಅವರೂ ಈ ಯೋಜನೆ ಭಾಗವಾಗಿದ್ದರು. ಅವರನ್ನೇ ಈ ಯೋಜನೆ ಬಗ್ಗೆ ಕೇಳಲಿ, ತನಿಖೆ ಮಾಡಲಿ. ಈ ಯೋಜನೆಯಲ್ಲಿ ನಾನು ಸಣ್ಣ ತಪ್ಪು ಮಾಡಿದ್ದರೂ ಎಂತಹುದೇ ಶಿಕ್ಷೆಗೆ ನಾನು ಬದ್ಧ ಎಂದರು.