ಬೆಂಗಳೂರು: ವಿಧಾನ ಪರಿಷತ್ ನ ಎರಡು ಸ್ಥಾನಗಳಿಗೆ ಅಪಾರ ಸಂಖ್ಯೆಯ ಆಕಾಂಕ್ಷಿಗಳಿದ್ದು, ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ದಿಲ್ಲಿಯಿಂದ ವಾಪಸಾದ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಅಭ್ಯರ್ಥಿ ಸ್ಥಾನಕ್ಕೆ ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದರು. ಎಲ್ಲರ ಹೆಸರನ್ನು ನಾವು ಹೈಕಮಾಂಡ್ ಗೆ ಕಳುಹಿಸಿದ್ದೇವೆ ಎಂದರು.
ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಸಿದ್ದರಾಮಯ್ಯ ಮತ್ತು ನಾನು ಒಮ್ಮತದಿಂದ ಶಿಫಾರಸು ಮಾಡಿರುವುದಾಗಿ ಡಿಕೆಶಿ ಹೇಳಿದರು. ಇರೋದೇ ಎರಡು ಸ್ಥಾನ, ಅದಕ್ಕೆ ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಶಿಫಾರಸು ಮಾಡಿದ್ದೇವೆ. ರಾಜ್ಯಸಭೆಯದ್ದು ಇನ್ನೂ ಏನೂ ತೀರ್ಮಾನ ಆಗಿಲ್ಲ. ಇದನ್ನು ತಿಳಿದುಕೊಂಡು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.
ನನಗೆ ಮಾಹಿತಿ ಇಲ್ಲ : ವಿಧಾನಪರಿಷತ್ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಸ್ ಆರ್ ಪಾಟೀಲ್ ಬೆಂಗಳೂರಿನಲ್ಲಿ ಮಾತನಾಡಿದ್ದು, ಟಿಕೆಟ್ ನೀಡುವ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿ ನಿರ್ಣಯ ತೆಗೆದುಕೊಳ್ಳುತ್ತಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಅವಕಾಶ ಕಲ್ಪಿಸಿದರೆ ಬದ್ಧತೆ, ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ನನಗೆ ಅಸಮಾಧಾನ ಆಗಿಲ್ಲ. ಪಕ್ಷದ ನಿರ್ಣಯಕ್ಕೆ ಬದ್ಧ ಎಂದು ಹೇಳಿದರು.
ಪಕ್ಷ ನನಗೆ ಈವರೆಗೆ ಬಹಳಷ್ಟು ಅವಕಾಶ ಕೊಟ್ಟಿದೆ. ಎರಡು ಬಾರಿ ಪ್ರತಿಪಕ್ಷದ ನಾಯಕನಾಗಿ, ಮಂತ್ರಿಯಾಗಿದ್ದೀನಿ. 24 ವರ್ಷಗಳ ಕಾಲ ಮೇಲ್ಮನೆ ಸದಸ್ಯನಾಗಿದ್ದೇನೆ. ಪಕ್ಷದ ಬಗ್ಗೆ ಅಪಾರವಾದ ಗೌರವವಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರು. ಹಾಗಾಗಿ ಭೇಟಿ ಆಗ್ತಾ ಇರ್ತೀನಿ. ಮೊನ್ನೆನೂ ಭೇಟಿಯಾಗಿದ್ದೆ. ಟಿಕೆಟ್ ಬಗ್ಗೆ ಸಿದ್ದರಾಮಯ್ಯ ಜೊತೆ ನಾನು ಚರ್ಚೆ ಮಾಡಿಲ್ಲ. ನಾನು ಲಾಬಿ ಮಾಡಲ್ಲ. ಅದು ಪಕ್ಷಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಓದಿ :ಇನ್ಮುಂದೆ ನಿಮ್ಮ ವಾಹನದ ನಂಬರ್‌ಪ್ಲೇಟ್ ಮೇಲೆ ಹೆಸರು, ಹುದ್ದೆಗಳನ್ನು ಹಾಕುವಂತಿಲ್ಲ