ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಗೆಲುವನ್ನು ಅತ್ಯಂತ ಪ್ರಮುಖ ಆದ್ಯತೆಯಾಗಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದಿನಿಂದ ಜಿಲ್ಲಾ ಪ್ರವಾಸ ಆರಂಭಿಸಿದ್ದಾರೆ. ಭಾರತ್ ಜೋಡೋ, ಸಂವಿಧಾನ ಬಚಾವೋ ಎಂಬ ಹೆಸರಿನಲ್ಲಿ ನೂತನ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಮೂಲಕ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಹೊರಟಿದೆ.
ಎಐಸಿಸಿಯ ಮುಂಚೂಣಿಯ ಒಂಬತ್ತು ಘಟಕಗಳಿಂದ ಪಾದಯಾತ್ರೆ ನಡೆಯಲಿದೆ. ಒಂಬತ್ತು ಘಟಕಗಳ ಅಧ್ಯಕ್ಷರು ಪಾದಯಾತ್ರೆಯಲ್ಲಿ ಸಾಗುವರು. ಇಂದಿನಿಂದ ಡಿಸೆಂಬರ್ 2 ವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಚಿತ್ರದುರ್ಗದಿಂದ ಆರಂಭವಾಗುವ ಪಾದಯಾತ್ರೆಗೆ ಕೆಪಿಸಿಸಿ ಅಧ್ಯಕ್ಷರು ಚಾಲನೆ ನೀಡಲಿದ್ದಾರೆ.
ಬೃಹತ್ ಸಮಾವೇಶ ಆಯೋಜನೆ: ಐದು ದಿನ ನಡೆಯಲಿರುವ ಭಾರತ ಜೋಡೊ ಸಂವಿಧಾನ ಬಚಾವೋ ಯಾತ್ರೆಯಲ್ಲಿ ಪ್ರತಿದಿನ 10 ಕಿ.ಮಿ. ದೂರ ನಾಯಕರು ಕಾಲ್ನಡಿಗೆಯಲ್ಲಿ ಸಾಗಲಿದ್ದಾರೆ. ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಈ ಪಾದಯಾತ್ರೆ ಸಾಗಲಿದೆ. ಕೊನೆಯ ದಿನ ಹುಬ್ಬಳ್ಳಿಯ ಮಹಾತ್ಮಗಾಂಧಿ ಪ್ರತಿಮೆ ಬಳಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಈ ಸಭೆಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಭಾಗಿಯಾಗಲಿದ್ದಾರೆ.
ಡಿಕೆಶಿ ಕಾರ್ಯಕ್ರಮದ ವೇಳಾಪಟ್ಟಿ ಡಿಕೆಶಿ ಇತರೆ ಕಾರ್ಯಕ್ರಮಗಳು:ಇಂದು ಮಧ್ಯಾಹ್ನ 1 ಗಂಟೆಗೆ ಚಿತ್ರದುರ್ಗದಲ್ಲಿ ಎಐಸಿಸಿಯ ವಿವಿಧ ವಿಭಾಗಗಳ ವತಿಯಿಂದ ಹಮ್ಮಿಕೊಂಡಿರುವ ಭಾರತ್ ಜೋಡೋ ಸಂವಿಧಾನ ಬಚಾವೋ ಪಾದಯಾತ್ರೆಯನ್ನು ಉದ್ಘಾಟಿಸುವ ಶಿವಕುಮಾರ್, ಮಧ್ಯಾಹ್ನ 2:30ಕ್ಕೆ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.
ಸಂಜೆ 4 ಗಂಟೆಗೆ ಹಮ್ಮಿಕೊಂಡಿರುವ ಶರಾವತಿ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತಿ ಸಮಿತಿ ವತಿಯಿಂದ ನಡೆಯುವ ಮಲೆನಾಡ ಜನಾಕ್ರೋಶ ಪಾದಯಾತ್ರೆ ಹಾಗೂ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಚಿಕ್ಕಮಗಳೂರಿಗೆ ರಸ್ತೆ ಮಾರ್ಗದಲ್ಲಿ ತೆರಳಿ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ:ನವೆಂಬರ್ 29ರಂದು ಬೆಳಗ್ಗೆ 9ಕ್ಕೆ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿ, ಮೂಡಿಗೆರೆಯತ್ತ ಪ್ರಯಾಣ ಬೆಳೆಸಲಿದ್ದಾರೆ. ಮಾಜಿ ಸಚಿವೆ ಮೋಟಮ್ಮ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚಿಸಿದ ಬಳಿಕ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ 3:30ಕ್ಕೆ ಮೂಡಿಗೆರೆ ತಾಲ್ಲೂಕಿನ ಕಾಫಿ ಬೆಳೆಗಾರರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆ ಆಲಿಸಲಿದ್ದಾರೆ. ಸಭೆ ಬಳಿಕ ಬೆಂಗಳೂರಿಗೆ ವಾಪಸ್ ಆಗುವ ಡಿಕೆ ಶಿವಕುಮಾರ್ ಡಿಸೆಂಬರ್ 1 ರಂದು ಕಲಬುರಗಿಗೆ ಪ್ರಯಾಣ ಬೆಳೆಸಲಿದ್ದಾರೆ. ಡಿಸೆಂಬರ್ ಹತ್ತಕ್ಕೆ ಕಲಬುರಗಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸುವ ಉದ್ದೇಶದಿಂದ ತೆರಳುವ ಅವರು ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ನಾಯಕರ ಜೊತೆ ಸಮಾಲೋಜಿಸಲಿದ್ದಾರೆ.
ಚುನಾವಣೆಗೆ ಸಂಘಟನೆ:2023ರ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸುವಂತೆ ಎಐಸಿಸಿ ನಾಯಕರು ನೀಡಿರುವ ಗುರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ವಹಿಸಿಕೊಳ್ಳುವಾಗ ಪಕ್ಷವನ್ನು ಅಧಿಕಾರಕ್ಕೆ ತರುವ ಭರವಸೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಕೆಲ ತಿಂಗಳು ಇರುವಾಗಲೇ ಡಿಕೆಶಿ ಜಿಲ್ಲಾ ಪ್ರವಾಸ ಆರಂಭಿಸಿದ್ದಾರೆ. ಚುನಾವಣೆ ಸಂಘಟನೆ ಹಾಗೂ ಪಕ್ಷ ಬಲವರ್ಧನೆಗಾಗಿ ಎಂದು ಘೋಷಿಸಿಕೊಳ್ಳದಿದ್ದರೂ ಬಹುತೇಕ ಇದೇ ನಿಟ್ಟಿನಲ್ಲಿ ಈ ಪ್ರವಾಸ ಇರಲಿದೆ.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆಯಲ್ಲಿ ಕಾಲ್ತುಳಿತ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕೈ, ಮೊಣಕಾಲಿಗೆ ಗಾಯ
ಜಿಲ್ಲಾವಾರು ಕಾಂಗ್ರೆಸ್ ನಾಯಕರ ಮಾನಸಿಕ ಸ್ಥೈರ್ಯ ವೃದ್ಧಿ ಹಾಗೂ ವಿಶ್ವಾಸಕ್ಕೆ ಪಡೆಯುವುದು ಡಿಕೆಶಿ ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ. ವಿವಿಧ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಡಿಕೆಶಿ ಪ್ರವಾಸ ಕೈಗೊಂಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಸಂಘಟನೆ ವಿಚಾರದಲ್ಲಿ ತಮ್ಮ ತಂತ್ರಗಾರಿಕೆ ಅರಿವಾಗದಿರಲಿ ಎಂಬ ನಿಟ್ಟಿನ ಪ್ರಯತ್ನವನ್ನು ಈ ಮೂಲಕ ನಡೆಸಿದ್ದಾರೆ.