ಕರ್ನಾಟಕ

karnataka

ETV Bharat / state

ಬಿಜೆಪಿ 40% ಪ್ರಕಾರ 40 ಸೀಟಿಗಿಳಿದರೂ ಅಚ್ಚರಿ ಇಲ್ಲ: ಡಿ.ಕೆ.ಶಿವಕುಮಾರ್ ವ್ಯಂಗ್ಯ - ಡಿಕೆಶಿ ಪ್ರಜಾಧ್ವನಿ ಯಾತ್ರೆ

ಬಿಜೆಪಿ ಸರ್ಕಾರದ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಈ ಬಾರಿ ಅವರು ಹೆಚ್ಚು ಸೀಟುಗಳನ್ನು ಗೆಲ್ಲಲ್ಲ ಎಂದು ಡಿಕೆಶಿ ಹೇಳಿದರು.

ಡಿಕೆ ಶಿವಕುಮಾರ್​
ಡಿಕೆ ಶಿವಕುಮಾರ್​

By

Published : Mar 8, 2023, 12:17 PM IST

Updated : Mar 8, 2023, 1:18 PM IST

ಡಿ.ಕೆ. ಶಿವಕುಮಾರ್ ಹೇಳಿಕೆ

ಬೆಂಗಳೂರು: "ಬಿಜೆಪಿ 40% ಲೆಕ್ಕಾಚಾರದ ಪ್ರಕಾರ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರ ಸೀಟುಗಳ ಸಂಖ್ಯೆ 40ಕ್ಕೆ ಇಳಿದರೂ ಆಶ್ಚರ್ಯ ಇಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಿನ ಪ್ರಕಾರ ಅವರದ್ದು 65 ಸೀಟಿಗಿಂತ ಮೇಲೆ ಏರುತ್ತಿಲ್ಲ. ಆದರೆ ಜನರ ಆಕ್ರೋಶ ನೋಡಿದರೆ ಅವರು 40 ಸೀಟಿಗೆ ನಿಲ್ತಾರೆ ಅಂತ ಅನ್ನಿಸುತ್ತಿದೆ" ಎಂದರು.

"ಲೋಕಾಯುಕ್ತಕ್ಕೆ ಶಕ್ತಿ ಕೊಡುವಲ್ಲಿ ಬಿಜೆಪಿ ಸಾಧನೆ ಏನೂ ಇಲ್ಲ. ಜನರು ಈ ಭ್ರಷ್ಟ ಸರ್ಕಾರವನ್ನು ತೆಗೆದು ಹಾಕಲಿ. ನಿನ್ನೆ ನಡೆದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮೆರವಣಿಗೆ ಬಗ್ಗೆ ಬಿಜೆಪಿ ಉತ್ತರ ಕೊಡಬೇಕು. ಅವರ ಪಕ್ಷದ ಸಿದ್ದಾಂತವೇನು ಎಂಬುದೇ ನನಗೆ ಆಶ್ಚರ್ಯವಾಗುತ್ತಿದೆ. ಎಸಿಬಿ ತೆಗೆದು ಲೋಕಾಯುಕ್ತಕ್ಕೆ ಶಕ್ತಿ ಕೊಡ್ತೇವೆ ಅಂತ ಬಿಜೆಪಿ ಹೇಳಲಿಲ್ಲ. ಕೋರ್ಟ್ ಹೇಳಿದ ಮೇಲೆ ಲೋಕಾಯುಕ್ತಕ್ಕೆ ಶಕ್ತಿ ಬಂದಿತು" ಎಂದು ಅವರು ಹೇಳಿದರು.

"ನಾಳೆ ರಾಜ್ಯ ಬಂದ್​ಗೆ ಕರೆ ಕೊಟ್ಟಿದ್ದೇವೆ. ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಾರೆ. ಶಾಂತಿಯುತ ಬಂದ್ ಆಗಲಿದೆ" ಎಂದು ಇದೇ ವೇಳೆ ತಿಳಿಸಿದರು. ಕಾಂಗ್ರೆಸ್‌ ಎರಡು ಗಂಟೆ ರಾಜ್ಯ ಬಂದ್ ವಿಚಾರ ಹಾಸ್ಯಾಸ್ಪದ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, "ನನ್ನ ಬಗ್ಗೆ ವ್ಯಂಗ್ಯ ಮಾಡ್ತಿರಲಿ. 200 ಯೂನಿಟ್ ಉಚಿತ ವಿದ್ಯುತ್ ಅಂದಿದ್ದಕ್ಕೆ ಟೀಕೆ ಮಾಡಿದರು. ಆಮೇಲೆ ಹೆಚ್ಚುವರಿ ಮೂರು ಗಂಟೆ ವಿದ್ಯುತ್ ಸರ್ಕಾರ ಕೊಡುತ್ತಿದ್ದು, ನೀವ್ಯಾವ ಲೆಕ್ಕಾಚಾರದಲ್ಲಿ ಹೆಚ್ಚಿನ ವಿದ್ಯುತ್ ಕೊಡ್ತಾ ಇದ್ದೀರಿ?. ನಮ್ಮ ಕಾಲದಲ್ಲೇ ಉಚಿತ ವಿದ್ಯುತ್ ಯೋಜನೆ ಜಾರಿಮಾಡಿದ್ದು. ಈಗ ಹೇಗೆ ಹೆಚ್ಚುವರಿ ವಿದ್ಯುತ್ ಸಿಎಂ ಬೊಮ್ಮಾಯಿ ಕೊಡುತ್ತಿದ್ದಾರೆ. ನಾನು ಪವರ್ ಮಿನಿಸ್ಟರ್ ಆಗಿದ್ದವನು, ನನಗೆ ಗೊತ್ತಿದೆ. ಈಗ ಹೆಚ್ಚಿನ ವಿದ್ಯುತ್ ಎಲ್ಲಿಂದ ತರ್ತೀರಾ? ನಮ್ಮ ಗ್ಯಾರಂಟಿ ಬಗ್ಗೆ ಟೀಕೆ ಮಾಡ್ತಾ ಇದ್ದಾರೆ. ನಾವು ಎರಡು ಸಾವಿರ ಅಂದ ಕೂಡಲೇ ಒಂದು ಸಾವಿರ ರೂಪಾಯಿಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೀರಿ. ಇದನ್ನು ಎಲ್ಲಿಂದ ಮಾಡ್ತೀರಾ? ಸಿಎಂ ಸುಳ್ಳಿನ ಸರ್ದಾರ ಆಗುತ್ತಿದ್ದಾರೆ" ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

"ಮುಂಬರುವ ಚುನಾವಣೆಗೆ ನಿನ್ನೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿದೆ. ಶೇಕಡಾ 75 ರಷ್ಟು ಟಿಕೆಟ್ ಹಂಚಿಕೆ ನಿರ್ಧಾರ ಆಗಿದೆ. ನಮಗೆ ಖಾತ್ರಿ ಇದೆ ಬಿಜೆಪಿ 65ರ ಮೇಲೆ ಏರಲ್ಲ. ಏನೇ ಮಾಡಿದ್ರೂ 65 ರ ಮೇಲೆ ಬರುವ ಸಾಧ್ಯತೆ ಇಲ್ಲ. 40%ಗೆ ಇಳಿದ್ರೂ ಅಚ್ಚರಿ ಇಲ್ಲ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ಬಳಿಕ ಬಿಜೆಪಿ 40 ಸ್ಥಾನ ಬಂದಿತ್ತು. ಈಗ ಅಷ್ಟೇ ಸ್ಥಾನ ಬಂದ್ರೂ ಅಚ್ಚರಿ ಬೇಡ. ಬಿಜೆಪಿ ಸರ್ಕಾರದ ಬಗ್ಗೆ ಜನಸಾಮಾನ್ಯರಿಗೆ ಸಮಾಧಾನ ಇಲ್ಲ" ಎಂದು ಟೀಕಿಸಿದರು.

ಪ್ರಜಾಧ್ವನಿ ಯಾತ್ರೆ:ಡಿ.ಕೆ.ಶಿವಕುಮಾರ್ ಮಾರ್ಚ್ 10 ರಿಂದ 12ರವರೆಗೆ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ ಕೈಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಗೆ ಹೆಲಿಕಾಪ್ಟರ್ ಮೂಲಕ ತೆರಳಿಲಿರುವ ಅವರು ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಅಲ್ಲಿಂದ ಮಧ್ಯಾಹ್ನ ಬಿಡದಿಯ ಈಗಲ್ಟನ್ ರೆಸಾರ್ಟ್ಗೆ ಆಗಮಿಸಿ ಅಲ್ಲಿ ಕೆಲ ಸಮಯ ಕಳೆದು, ಮಾಗಡಿ ವಿಧಾನಸಭೆ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

ಅದೇ ದಿನ ಸಂಜೆ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಡಿಕೆಶಿ ಶನಿವಾರ ರಾಮನಗರ ಜಿಲ್ಲೆಯಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಮಂಡ್ಯಕ್ಕೆ ಪ್ರಯಾಣಿಸುವ ಅವರು ಪಾಂಡವಪುರದಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸಂಜೆ 3 ಗಂಟೆಗೆ ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪ್ರಜಾಧ್ವನಿ ಕಾರ್ಯಕ್ರಮ ಪೂರೈಸಿ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂದು ಕೆಪಿಸಿಸಿಯಿಂದ ಮಾಹಿತಿ ದೊರೆತಿದೆ.

ಇದನ್ನೂ ಓದಿ:ಮಂಡ್ಯದಲ್ಲಿ ಪ್ರಧಾನಿ ಮೋದಿ ರೋಡ್ ಶೋ: 'ಮರಗಳ ಮಾರಣಹೋಮವೇಕೆ?'

Last Updated : Mar 8, 2023, 1:18 PM IST

ABOUT THE AUTHOR

...view details